Sakleshpura | ಕಾರು-ಸಿಎನ್‌ಜಿ ಆಟೋ ಮುಖಾಮುಖಿ ಢಿಕ್ಕಿ : ಮೂವರಿಗೆ ಗಂಭೀರ ಗಾಯ
Update: 2026-05-22 14:58 IST
ಸಕಲೇಶಪುರ : ತಾಲೂಕಿನ ಹಾನುಬಾಳು ಸಮೀಪ ಶುಕ್ರವಾರ ಬೆಳಿಗ್ಗೆ ಕಾರು ಮತ್ತು ಸಿಎನ್‌ಜಿ ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಹಾನುಬಾಳು ಸಮೀಪದ ರಸ್ತೆಯಲ್ಲಿ ವೇಗವಾಗಿ ಸಾಗುತ್ತಿದ್ದ ಕಾರು ಮತ್ತು ಎದುರಿನಿಂದ ಬರುತ್ತಿದ್ದ ಸಿಎನ್‌ಜಿ ಆಟೋ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಆಟೋ ಪಲ್ಟಿಯಾಗಿ ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ಆಟೋಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳೀಯರು ಹಾಗೂ ಸಾರ್ವಜನಿಕರು ತಕ್ಷಣ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.