×
Ad

ಶಿಗ್ಗಾಂವಿ ಕ್ಷೇತ್ರದಲ್ಲಿ ಹೆಚ್ಚಿದ ಜೂಜಾಟ ಪ್ರಕರಣ | ಕ್ರಮಕ್ಕೆ ಡಿಜಿಪಿ, ಎಸ್ಪಿಗೆ ಸಂಸದ ಬೊಮ್ಮಾಯಿ ಒತ್ತಾಯ

Update: 2025-05-29 23:58 IST

ಬಸವರಾಜ ಬೊಮ್ಮಾಯಿ

ಹಾವೇರಿ : ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿ 6-7 ತಿಂಗಳಿನಿಂದ ಜೂಜಾಟ, ಒಸಿ ಅಲ್ಲದೆ ಡ್ರಗ್ಸ್ ದಂಧೆಯ ಬಗ್ಗೆ ಹೆಚ್ಚಾಗಿ ಸುದ್ದಿ ಬರುತ್ತಿದ್ದು, ಈ ಎಲ್ಲ ಚಟುವಟಿಕೆಗಳಿಗೆ ಪೊಲೀಸರು ಸಾಥ್ ಕೊಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಡಿಜಿಪಿ ಹಾಗೂ ಹಾವೇರಿ ಎಸ್ಪಿ ಅವರಿಗೆ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಲವು ಬಾರಿ ಜೂಜಾಟದಲ್ಲಿ ಕೆಲವರು ಸಿಕ್ಕಿದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಲ್ಲಿ ಇದುವರೆಗೆ ಎರಡು ಪ್ರಕರಣಗಳು ಜೂಜುಕೋರರ ಮೇಲೆ ದಾಖಲಾಗಿದ್ದು, ಯಾರೊಬ್ಬರನ್ನು ಬಂಧಿಸದೆ, ನಕಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹುಬ್ಬಳ್ಳಿಯ ಸಿಸಿಬಿ ಪೊಲಿಸರು ಬಿಸ್ನಳ್ಳಿ ಬಳಿ 50 ಕೆ.ಜಿ. ಗಾಂಜಾ ಸಿಕ್ಕಿದ್ದನ್ನು ಕೇವಲ 10 ಕೆ.ಜಿ. ಎಂದು ತೋರಿಸಿದ್ದಾರೆ ಎಂದು ಕೇಸುಗಳ ಮೂಲಕ ಗೊತ್ತಾಗುತ್ತಿದೆ. ಒಂದು ಸುಸಂಸ್ಕೃತ ಕ್ಷೇತ್ರ ಜೂಜುಗಾರರ ಕ್ಷೇತ್ರವಾಗಿ ಪರಿವರ್ತನೆ ಆಗುತ್ತಿರುವುದು ನನಗೆ ದುಃಖ ತಂದಿದೆ. ಕೂಡಲೇ ತಾಲೂಕಿನಲ್ಲಿ ಒಸಿ, ಜೂಜಾಟ ಹಾಗೂ ಗಾಂಜಾ ದಂಧೆಯನ್ನು ನಿಲ್ಲಿಸಬೇಕು. ಎಷ್ಟೇ ದೊಡ್ಡ ಪ್ರಭಾವಿ ನಾಯಕರಿದ್ದರೂ ರಾಜಕೀಯ ಒತ್ತಡಕ್ಕೆ ಮಣಿಯದೆ, ಎಲ್ಲರನ್ನು ಬಂಧಸಬೇಕೆಂದು ಡಿಜಿಪಿ ಹಾಗೂ ಹಾವೇರಿ ಎಸ್ಪಿ ಅವರಿಗೆ ಒತ್ತಾಯಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News