×
Ad

‌ಶಿಗ್ಗಾಂವಿ ಉಪಚುನಾವಣೆ | ಯಾಸಿರ್ ಖಾನ್ ಪಠಾಣ್, ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

Update: 2024-10-25 16:51 IST

ಹಾವೇರಿ : ಉಪಚುನಾವಣೆ ನಡೆಯಲಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್‌ ಹಾಗೂ ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಯಾಸಿರ್ ಅಹ್ಮದ್ ಖಾನ್ ಪಠಾಣ್ ಪರವಾಗಿ ಶುಕ್ರವಾರ ಬೃಹತ್ ರೋಡ್ ಶೋ ನಡೆಸಲಾಯಿತು. ಇಲ್ಲಿನ ಚನ್ನಮ್ಮ ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೂ ನಡೆದ ರೋಡ್ ಶೋನಲ್ಲಿ ಸಚಿವರಾದ ಝಮೀರ್ ಅಹ್ಮದ್ ಖಾನ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಯಾಸಿರ್​ ಪಠಾಣ್​, "ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಯಾರಿಗೇ ಟಿಕೆಟ್ ಸಿಕ್ಕರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದ್ದೇವೆ. ಕಾಂಗ್ರೆಸ್ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಒಲವಿದೆ. ಕಳೆದ ನಾಲ್ಕು ತಿಂಗಳಿಂದ ನಿರಂತರವಾಗಿ ಕ್ಷೇತ್ರ ಸುತ್ತಾಡಿದ್ದೇನೆ. ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದಡಿಯಲ್ಲಿ ಟಿಕೆಟ್ ನೀಡಿದೆ. ಅಲ್ಪಸಂಖ್ಯಾತರ ಸಮಾಜಕ್ಕೆ ಟಿಕೆಟ್ ನೀಡಲಾಗಿದೆ" ಎಂದರು.

ನಾಮಪತ್ರ ಸಲ್ಲಿಸಿದ ಭರತ್ ಬೊಮ್ಮಾಯಿ :

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ತಂದೆ ಬಸವರಾಜ ಬೊಮ್ಮಾಯಿ ಹಾಗೂ ಮುಖಂಡರ ಸಮ್ಮುಖದಲ್ಲಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದರು.

ಗುರುವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ಭರತ್ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಜೊತೆ ಶುಕ್ರವಾರ ಶಿಗ್ಗಾವಿಯಲ್ಲಿ ಮೆರವಣಿಗೆ ನಡೆಸಿ ಉಮೇದುವಾರಿಕೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News