ಮೆಹುಲ್ ಚೋಕ್ಸಿ ಗಡೀಪಾರಿಗೆ ಬೆಲ್ಜಿಯಂ ಕೋರ್ಟ್ ಹಸಿರು ನಿಶಾನೆ
ಮೆಹುಲ್ ಚೋಕ್ಸಿ | PC : ANI
ಹೊಸದಿಲ್ಲಿ: ಭಾರತೀಯ ಬ್ಯಾಂಕ್ ಗಳಿಗೆ 13 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಮೆಹುಲ್ ಚೋಕ್ಸಿಯನ್ನು ವಿಚಾರಣೆ ಎದುರಿಸುವ ಸಲುವಾಗಿ ಭಾರತಕ್ಕೆ ಗಡೀಪಾರು ಮಾಡಬೇಕು ಎಂಬ ಮನವಿಯನ್ನು ಪುರಸ್ಕರಿಸಿರುವ ಬೆಲ್ಜಿಯಂ ಕೋರ್ಟ್, ದೇಶಭ್ರಷ್ಟ ಉದ್ಯಮಿಯ ಬಂಧನವನ್ನು ಎತ್ತಿಹಿಡಿದಿದೆ. ಚೋಕ್ಸಿಯನ್ನು ಗಡಿಪಾರು ಮಾಡುವಂತೆ ಭಾರತ ಮಾಡಿಕೊಂಡ ಮನವಿಗೆ ಕೋರ್ಟ್ ಅನುಮೋದನೆ ನೀಡಿದೆ.
ಈ ವರ್ಷದ ಏಪ್ರಿಲ್ ನಲ್ಲಿ ಚೋಕ್ಸಿಯನ್ನು ಆ್ಯಂಟ್ರೆಪ್ ನಲ್ಲಿ ಬಂಧಿಸಿದ ಬಳಿಕ ಈ ಮಹತ್ವದ ಬೆಳವಣಿಗೆ ನಡೆದಿದೆ. ಬ್ರಿಟನ್ ಜೈಲಿನಲ್ಲಿರುವ ವಜ್ರದ ಉದ್ಯಮಿ ನೀರವ್ ಮೋದಿಯ ಮಾವನಾಗಿರುವ ಚೋಕ್ಸಿಗೆ ಈ ಆದೇಶವನ್ನು ಪ್ರಶ್ನಿಸಿ ಮುಂದಿನ 15 ದಿನಗಳ ಒಳಗಾಗಿ ಉನ್ನತ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಆದರೆ ಭಾರತ ಈ ತೀರ್ಪಿನ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದು, ಬೆಲ್ಜಿಯಂ ಕೋರ್ಟ್ ಆದೇಶ ಆತನನ್ನು ಭಾರತಕ್ಕೆ ಮರಳುವಂತೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಎಂದು ಬಣ್ಣಿಸಿದೆ. ಜಾಮೀನು ನಿರಾಕರಿಸಲ್ಪಟ್ಟಿರುವ ಚೋಕ್ಸಿ ಆಂಟ್ರೆಪ್ ಜೈಲಿನಲ್ಲಿ ಸೆರೆಮನೆ ವಾಸದಲ್ಲಿದ್ದಾನೆ. ಭಾರತಕ್ಕೆ ಆತನನ್ನು ಮರಳಿಸಬೇಕು ಎಂದು ಭಾರತ ಮಾಡಿಕೊಂಡಿರುವ ಮನವಿಯನ್ನು ಬೆಲ್ಜಿಯಂ ನ್ಯಾಯಾಂಗ ವ್ಯವಸ್ಥೆ ಇತ್ಯರ್ಥಪಡಿಸುವ ವರೆಗೆ ಜೈಲುವಾಸ ಮುಂದುವರಿಯಲಿದೆ.
ಮೆಹುಲ್ ಚೋಕ್ಸಿ ಉದ್ದೇಶಪೂರ್ವಕವಾಗಿ ತಲೆಮರೆಸಿಕೊಂಡಿರುವ ಆರೋಪಿಯಾಗಿದ್ದು, ಆತನಿಗೆ ಜಾಮೀನು ಮಂಜೂರು ಮಾಡಿದರೆ ಬೇರೆ ದೇಶಕ್ಕೆ ಪಲಾಯನ ಮಾಡುವ ಸಾಧ್ಯತೆ ಇದೆ ಎಂದು ಭಾರತದ ಕಾನೂನು ಜಾರಿ ಅಧಿಕಾರಿಗಳು ವಾದ ಮಂಡಿಸಿದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ ನಲ್ಲಿ ಚೋಕ್ಸಿಯ ಜಾಮೀನು ಮನವಿಯನ್ನು ಬೆಲ್ಜಿಯಂನ ಎರಡು ಕೋರ್ಟ್ ಗಳು ತಿರಸ್ಕರಿಸಿದ್ದವು. ಭಾರತದಲ್ಲಿ ಆತ ಎಸಗಿರುವ ಆರ್ಥಿಕ ಅಪರಾಧಗಳಲ್ಲಿ ಆತ ಷಾಮೀಲಾಗಿರುವ ಬಗ್ಗೆ ಸಿಬಿಐ, ಬೆಲ್ಜಿಯಂನ ಅಭಿಯೋಜಕರಿಗೆ ದಾಖಲೆಗಳನ್ನು ಒದಗಿಸಿತ್ತು ಹಾಗೂ ಆತ ಈ ಹಿಂದೆ ಅಮೆರಿಕ ಮತ್ತು ಆಂಟಿಗುವಾದಿಂದ ತಪ್ಪಿಸಿಕೊಂಡಿದ್ದನ್ನು ಗಮನಕ್ಕೆ ತಂದಿತ್ತು.