×
Ad

ಬಲೂಚಿಸ್ತಾನದಲ್ಲಿ ಮಿಲಿಟರಿ ಸಿಬ್ಬಂದಿ ಪ್ರಯಾಣಿಸುತ್ತಿದ್ದ ರೈಲು ಗುರಿಯಾಗಿಸಿ ಸ್ಫೋಟ: 24 ಮಂದಿ ಮೃತ್ಯು;ವರದಿ

Update: 2026-05-24 15:03 IST

Screengrab:X

ಕ್ವೆಟ್ಟಾ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಮಿಲಿಟರಿ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ರವಿವಾರ ನಡೆದ ಭಾರೀ ಸ್ಫೋಟದಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು aljazeera.com ವರದಿ ಮಾಡಿದೆ.

ಕ್ವೆಟ್ಟಾದ ಚಮನ್ ಫಾಟಕ್ ರೈಲ್ವೆ ನಿಲ್ದಾಣದ ಸಮೀಪ ರೈಲ್ವೆ ಹಳಿಯ ಬಳಿ ಸ್ಫೋಟ ಸಂಭವಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ರೈಲಿನ ಒಂದು ಬೋಗಿ ಭಾಗಶಃ ಹಾನಿಗೊಳಗಾಗಿದ್ದು, ಸಮೀಪದಲ್ಲಿ ನಿಲ್ಲಿಸಲಾಗಿದ್ದ 10 ವಾಹನಗಳಿಗೂ ಹಾನಿಯಾಗಿದೆ.

ಸ್ಫೋಟದ ಪರಿಣಾಮ ಹತ್ತಿರದ ಕಟ್ಟಡಗಳ ಕಿಟಕಿಗಳು ಮತ್ತು ಗಾಜಿನ ಫಲಕಗಳು ಛಿದ್ರಗೊಂಡಿವೆ ಎಂದು ʼಜಿಯೋ ನ್ಯೂಸ್ʼ ವರದಿ ಮಾಡಿದೆ.

ಗಾಯಗೊಂಡವರನ್ನು ಕ್ವೆಟ್ಟಾದ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಳಿಕ ಕ್ವೆಟ್ಟಾದ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಸ್ಫೋಟದ ಬಳಿಕ ಪೇಶಾವರಕ್ಕೆ ತೆರಳಬೇಕಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕ್ವೆಟ್ಟಾ ರೈಲ್ವೆ ನಿಲ್ದಾಣದಲ್ಲೇ ತಡೆಹಿಡಿಯಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಸಂಭವಿಸಿದ ಸ್ಫೋಟದ ಹಿನ್ನೆಲೆಯಲ್ಲಿ ಎಲ್ಲ ಸಂಬಂಧಿತ ಭದ್ರತಾ ಸಂಸ್ಥೆಗಳನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ ಎಂದು ಗೃಹ ಸಚಿವರ ವಕ್ತಾರ ಬಾಬರ್ ಯೂಸಫ್‌ಜೈ ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳಿಗೆ ಅಡ್ಡಿಯಾಗದಂತೆ ಸಾರ್ವಜನಿಕರು ಸ್ಫೋಟ ಸ್ಥಳದ ಬಳಿ ಸೇರದಂತೆ ಅವರು ಮನವಿ ಮಾಡಿದ್ದಾರೆ.

ಈ ದಾಳಿಯ ಹೊಣೆಯನ್ನು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಹೊತ್ತುಕೊಂಡಿದೆ. ಸಂಘಟನೆಯ ವಕ್ತಾರ ಜೀಯಾಂಡ್ ಬಲೂಚ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಕ್ವೆಟ್ಟಾ ಕ್ಯಾಂಟ್‌ನಿಂದ ಆಕ್ರಮಿತ ಪಡೆಗಳ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ಸಂಘಟಿತ ಫಿದಾಯಿ ದಾಳಿ ನಡೆಸಲಾಗಿದೆ. ಈ ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿಯನ್ನು ಬಲೂಚ್ ಲಿಬರೇಶನ್ ಆರ್ಮಿ ಸ್ವೀಕರಿಸುತ್ತದೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News