ಢಾಕಾ ವಿಮಾನ ನಿಲ್ದಾಣದಲ್ಲಿ ಬೆಂಕಿ ದುರಂತ: ವಿಮಾನ ಹಾರಾಟ ಸ್ಥಗಿತ
ಹಝ್ರತ್ ಶಹ್ಜಾಲಾಲ್ ಅಂತರಾಷ್ಟ್ರೀಯ ವಿಮಾನ | Photo Credit : NDTV
ಢಾಕಾ, ಅ.18: ಬಾಂಗ್ಲಾದೇಶದ ರಾಜಧಾನಿ ಢಾಕಾದ ಹಝ್ರತ್ ಶಹ್ಜಾಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ವಿಭಾಗದಲ್ಲಿ ಶನಿವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು ಹೊಗೆಯ ದಟ್ಟ ಕಾರ್ಮೋಡ ವಿಮಾನ ನಿಲ್ದಾಣವಿಡೀ ಆವರಿಸಿದ್ದರಿಂದ ಎಲ್ಲಾ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಬಾಂಗ್ಲಾದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿದೆ.
ಅಪರಾಹ್ನ 2:30ಕ್ಕೆ ಬೆಂಕಿ ದುರಂತದ ಮಾಹಿತಿ ತಿಳಿದೊಡನೆ 36 ಅಧಿಕ ಅಗ್ನಿಶಾಮಕ ವಾಹನಗಳನ್ನು ವಿಮಾನ ನಿಲ್ದಾಣಕ್ಕೆ ರವಾನಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆಗೆ ಸೇನಾಪಡೆ, ನೌಕಾ ಪಡೆ ಹಾಗೂ ವಾಯುಪಡೆಯ ಅಗ್ನಿಶಾಮಕ ದಳವೂ ಕೈಜೋಡಿಸಿದೆ. ತಕ್ಷಣಕ್ಕೆ ಯಾವುದೇ ಸಾವು ನೋವಿನ ಮಾಹಿತಿಯಿಲ್ಲ. ಮುಂದಿನ ಸೂಚನೆಯವರೆಗೆ ವಿಮಾನ ನಿಲ್ದಾಣದಲ್ಲಿನ ಎಲ್ಲಾ ಕಾರ್ಯಾಚರಣೆಯನ್ನೂ ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣದತ್ತ ಆಗಮಿಸುತ್ತಿದ್ದ ಕನಿಷ್ಠ 9 ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣದತ್ತ ಪಥ ಬದಲಾಯಿಸಲಾಗಿದೆ ಎಂದು ಪ್ರಾಧಿಕಾರದ ಮೂಲಗಳು ಹೇಳಿವೆ.
ಸರಕು ವಿಭಾಗದಲ್ಲಿ ಶೇಖರಿಸಿಟ್ಟಿದ್ದ ರಾಸಾಯನಿಕಗಳಿಂದಾಗಿ ಬೆಂಕಿ ಕ್ಷಣಾರ್ಧಕ್ಕೆ ವ್ಯಾಪಿಸಿದ್ದು ವಿಮಾನ ನಿಲ್ದಾಣದ ಬಹುತೇಕ ಸ್ಥಳಗಳಲ್ಲಿ ಹೊಗೆ ವ್ಯಾಪಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.