ಭಾರತೀಯ ಯುವಜನರಿಗೆ ಉದ್ಯೋಗ ಸಿಗಬೇಕಾದರೆ ಆರ್ಥಿಕತೆ ಇನ್ನಷ್ಟು ವೇಗ ಪಡೆಯಬೇಕು: ಅರ್ಥಶಾಸ್ತ್ರಜ್ಞ ನೌರಿಯಲ್ ರೌಬಿನಿ
ಅರ್ಥಶಾಸ್ತ್ರಜ್ಞ ನೌರಿಯಲ್ ರೌಬಿನಿ (Photo: Reuters)
ಶೇ. 7ರಷ್ಟು ಬೆಳವಣಿಗೆ ಸಾಲದು. ಯುವಜನರು ಉತ್ತಮ ಉದ್ಯೋಗ ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಭಾರತವು ಶೇ. 9ರಷ್ಟು ಬೆಳವಣಿಗೆಯ ಸಮೀಪಕ್ಕೆ ಬರಬೇಕು ಎಂದು ಅರ್ಥಶಾಸ್ತ್ರಜ್ಞ ನೌರಿಯಲ್ ರೌಬಿನಿ ಅಭಿಪ್ರಾಯಪಟ್ಟಿದ್ದಾರೆ.
ಭಾರತವು ಮುಂಬರುವ ವರ್ಷಗಳಲ್ಲಿ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾದರೆ, ಅತಿದೊಡ್ಡ ಆರ್ಥಿಕ ಯಶೋಗಾಥೆಗಳಲ್ಲಿ ಒಂದಾಗಬಹುದು ಎಂದು 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಮುಂಚಿತವಾಗಿ ಊಹಿಸಿದ್ದ ಅರ್ಥಶಾಸ್ತ್ರಜ್ಞ ನೌರಿಯಲ್ ರೌಬಿನಿ ಅಭಿಪ್ರಾಯಪಟ್ಟಿದ್ದಾರೆ.
2008ರ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಊಹಿಸಿದ್ದಕ್ಕಾಗಿ ಅವರನ್ನು ‘ಡಾ. ಡೂಮ್’ ಎಂದು ಕರೆಯಲಾಗುತ್ತದೆ. ಅವರ ಪ್ರಕಾರ, ಭಾರತವು ತನ್ನ ಯುವ ಕಾರ್ಯಪಡೆಗೆ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಲು ಬೆಳವಣಿಗೆಯ ದರವನ್ನು ಶೇ 9ರ ಸಮೀಪಕ್ಕೆ ಏರಿಸಬೇಕಿದೆ.
‘ದಿ ಇಕನಾಮಿಕ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ರೌಬಿನಿ ಅವರು, ಭಾರತವು ಇನ್ನೂ ಬೃಹತ್ ಯಶೋಗಾಥೆಯಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ. ದೇಶೀಯ ಮಾರುಕಟ್ಟೆ, ಪ್ರತಿಭಾವಂತ ಮಾನವ ಸಂಪನ್ಮೂಲ, ಸ್ಥೂಲ ಆರ್ಥಿಕತೆಯ ಮೂಲಭೂತ ಅಂಶಗಳು ಮತ್ತು ಅರ್ಥವ್ಯವಸ್ಥೆಯನ್ನು ತೆರೆಯುವ ಪ್ರಯತ್ನಗಳು ದೀರ್ಘಕಾಲೀನ ಬೆಳವಣಿಗೆಯ ದೃಷ್ಟಿಕೋನಕ್ಕೆ ಪೂರಕವಾಗಿವೆ ಎಂದು ಅವರು ಹೇಳಿದ್ದಾರೆ.
“ಶೇ. 7ರಷ್ಟು ಬೆಳವಣಿಗೆ ಸಾಲದು. ಯುವಜನರು ಉತ್ತಮ ಉದ್ಯೋಗ ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಭಾರತವು ಶೇ. 9ರಷ್ಟು ಬೆಳವಣಿಗೆಯ ಸಮೀಪಕ್ಕೆ ಬರಬೇಕು” ಎಂದು ಅವರು ಹೇಳಿದ್ದಾರೆ.
ನಿರಂತರ ಸುಧಾರಣೆಗಳು ಭಾರತದ ಸಂಭಾವ್ಯ ಬೆಳವಣಿಗೆಯನ್ನು ಶೇ. 8ಕ್ಕಿಂತ ಹೆಚ್ಚಿಸಬಹುದು. ಆದರೆ, ಕಾರ್ಯಪಡೆಗೆ ಸೇರ್ಪಡೆಯಾಗುವ ಲಕ್ಷಾಂತರ ಯುವಕರಿಗೆ ಉತ್ತಮ ಉದ್ಯೋಗ ಒದಗಿಸಲು ಶೇ. 9ರ ಸಮೀಪದ ಬೆಳವಣಿಗೆಯನ್ನು ಸಾಧಿಸುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೃತಕ ಬುದ್ಧಿಮತ್ತೆಯು ದೈಹಿಕ ಶ್ರಮ ಆಧಾರಿತ ಮತ್ತು ಜ್ಞಾನಾಧಾರಿತ ಉದ್ಯೋಗಗಳೆರಡನ್ನೂ ಮರುರೂಪಿಸುತ್ತಿರುವ ಸಂದರ್ಭದಲ್ಲಿ, ಉದ್ಯೋಗ ಸೃಷ್ಟಿಯು ಭಾರತದ ಬೆಳವಣಿಗೆಯ ಪಯಣದ ಪ್ರಮುಖ ಸವಾಲಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಬದಲಾವಣೆಗಳಾಗುತ್ತಿರುವುದರಿಂದ, ಕಂಪೆನಿಗಳು ಚೀನಾವನ್ನು ಹೊರತುಪಡಿಸಿ ಇತರ ದೇಶಗಳಲ್ಲಿಯೂ ಉತ್ಪಾದನೆಯನ್ನು ವಿಸ್ತರಿಸಲು ಮುಂದಾಗಿವೆ. ಇದರಿಂದ ಭಾರತಕ್ಕೆ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು ಅವಕಾಶ ಸಿಗಲಿದೆ ಎಂದು ರೌಬಿನಿ ನಂಬಿದ್ದಾರೆ.
“ಭೂರಾಜಕೀಯವು ಭಾರತಕ್ಕೆ ನೆರವಾಗಲಿದೆ. ಚೀನಾವನ್ನು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗುತ್ತಿದೆ. ಉತ್ಪಾದನೆಯನ್ನು ಹಲವು ದೇಶಗಳಿಗೆ ಹಂಚುವ ನಿಟ್ಟಿನಲ್ಲಿ ವ್ಯವಹಾರಗಳಿಗೆ ಪ್ರೋತ್ಸಾಹ ನೀಡಲು, ಸಮೀಪದ ದೇಶಗಳಲ್ಲಿ ಉತ್ಪಾದನೆ ನಡೆಸುವ ಹಾಗೂ ಸ್ನೇಹಪರ ರಾಷ್ಟ್ರಗಳಲ್ಲಿ ಪೂರೈಕೆ ಸರಪಳಿಗಳನ್ನು ರೂಪಿಸುವ ಅವಕಾಶ ಭಾರತಕ್ಕಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಬೃಹತ್ ದೇಶೀಯ ಮಾರುಕಟ್ಟೆಯು ಚೀನಾಕ್ಕೆ ಪರ್ಯಾಯಗಳನ್ನು ಹುಡುಕುತ್ತಿರುವ ಉತ್ಪಾದಕರನ್ನು ಆಕರ್ಷಿಸಲು ಸಹಾಯ ಮಾಡಲಿದೆ. ಎಲೆಕ್ಟ್ರಾನಿಕ್ಸ್, ವಾಹನೋದ್ಯಮ ಮತ್ತು ಸೆಮಿಕಂಡಕ್ಟರ್ ಸಂಬಂಧಿತ ಕೈಗಾರಿಕೆಗಳು ಕಂಪೆನಿಗಳು ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯವನ್ನು ಬಯಸುತ್ತಿರುವ ಪ್ರಮುಖ ಕ್ಷೇತ್ರಗಳಾಗಿವೆ.
ಅಮೆರಿಕದೊಂದಿಗಿನ ನಿಕಟ ವ್ಯಾಪಾರ ಸಂಬಂಧಗಳು ಭಾರತದ ಭವಿಷ್ಯದ ನಿರೀಕ್ಷೆಗಳನ್ನು ಬಲಪಡಿಸಬಹುದು. ಹಣದುಬ್ಬರ ಮತ್ತು ಕೈಗೆಟಕುವ ಬೆಲೆಯ ಕುರಿತ ಕಳವಳಗಳು ಅಮೆರಿಕದ ನೀತಿ ನಿರೂಪಕರ ಮೇಲೆ ಒತ್ತಡ ಹೇರುವುದರಿಂದ, ಅಮೆರಿಕದ ಸುಂಕಗಳು ಮತ್ತಷ್ಟು ಕಡಿಮೆಯಾಗಬಹುದು. ಭಾರತ ಸೇರಿದಂತೆ ಇತರ ದೇಶಗಳೊಂದಿಗೆ ಹೆಚ್ಚು ರಚನಾತ್ಮಕ ವ್ಯಾಪಾರ ನೀತಿಯನ್ನು ಅಳವಡಿಸಿಕೊಳ್ಳುವಂತೆ ಮಾರುಕಟ್ಟೆಯ ಪರಿಸ್ಥಿತಿಗಳು ಅಮೆರಿಕವನ್ನು ಪ್ರೇರೇಪಿಸಬಹುದು ಎಂದು ರೌಬಿನಿ ಅಭಿಪ್ರಾಯಪಟ್ಟಿದ್ದಾರೆ.
ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಮೊದಲ ಹಂತವನ್ನು ಅಂತಿಮಗೊಳಿಸಲಾಗಿದ್ದು, ಅದರ ಕಾನೂನು ಕರಡು ರಚನೆಯ ಹಂತದಲ್ಲಿತ್ತು. ಫೆಬ್ರುವರಿಯಲ್ಲಿ ಘೋಷಿಸಲಾದ ಚೌಕಟ್ಟಿನಡಿ, ಹೆಚ್ಚಿನ ಭಾರತೀಯ ಸರಕುಗಳ ಮೇಲಿನ ಅಮೆರಿಕದ ಸುಂಕವನ್ನು ಶೇ 50ರಿಂದ ಶೇ. 18ಕ್ಕೆ ಇಳಿಸುವುದಾಗಿ ತಿಳಿಸಲಾಗಿತ್ತು. ಆದರೆ, ವಿಯೆಟ್ನಾಂ, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾದ ರಫ್ತುದಾರರೊಂದಿಗೆ ಸ್ಪರ್ಧಿಸಲು ಭಾರತವು ಇನ್ನಷ್ಟು ಉತ್ತಮ ಮಾರುಕಟ್ಟೆ ಪ್ರವೇಶವನ್ನು ಬಯಸಿತ್ತು.
ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಲು ದೇಶ ವಿಫಲವಾದರೆ, ಭಾರತದ ಜನಸಂಖ್ಯಾ ಪ್ರಯೋಜನವು ಸ್ವಯಂಚಾಲಿತವಾಗಿ ಆರ್ಥಿಕ ಲಾಭವಾಗಿ ಪರಿವರ್ತನೆಯಾಗುವುದಿಲ್ಲ. ಕೃತಕ ಬುದ್ಧಿಮತ್ತೆಯು ವ್ಯಾಪಕ ಶ್ರೇಣಿಯ ಉದ್ಯೋಗಗಳ ಸ್ವರೂಪವನ್ನು ಬದಲಾಯಿಸಬಹುದು. ಹೀಗಾಗಿ, ಜನಸಂಖ್ಯೆಯ ಬೆಳವಣಿಗೆಯನ್ನೇ ಆರ್ಥಿಕ ಶಕ್ತಿಯ ಮೂಲವಾಗಿ ಅವಲಂಬಿಸುವುದು ಕಷ್ಟವಾಗುತ್ತದೆ ಎಂದು ರೌಬಿನಿ ಎಚ್ಚರಿಸಿದ್ದಾರೆ.
ತಂತ್ರಜ್ಞಾನ ಮತ್ತು ವೃತ್ತಿಪರ ಸೇವೆಗಳಲ್ಲಿ ಕೇಂದ್ರೀಕೃತವಾಗಿರುವ ಹೆಚ್ಚು ಕೌಶಲ್ಯದ ಉದ್ಯೋಗಗಳಾಚೆಗೆ, ಕಾರ್ಖಾನೆಗಳು, ಸಾಗಣೆ ಮತ್ತು ಉಗ್ರಾಣ ವ್ಯವಸ್ಥೆ (ಲಾಜಿಸ್ಟಿಕ್ಸ್) ಹಾಗೂ ಪೂರೈಕೆದಾರರ ಜಾಲಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಉತ್ಪಾದನಾ ವಲಯವು ಪ್ರಮುಖ ಪಾತ್ರ ವಹಿಸಬಹುದು. ಎಲೆಕ್ಟ್ರಾನಿಕ್ಸ್, ವಾಹನೋದ್ಯಮ ಮತ್ತು ಜವಳಿ ಕ್ಷೇತ್ರಗಳಲ್ಲಿ ಉತ್ಪಾದಕತೆಯನ್ನು ಸುಧಾರಿಸುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಸಾಧ್ಯವಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಅಪಾಯಕಾರಿ ಅಡಮಾನ ಸಾಲಗಳು ಮತ್ತು ಗೃಹಸಾಲಗಳ ಹೆಚ್ಚಳ ಸೇರಿದಂತೆ ಅಮೆರಿಕದ ಹಣಕಾಸು ವ್ಯವಸ್ಥೆಯಲ್ಲಿನ ದೌರ್ಬಲ್ಯಗಳು ದೊಡ್ಡ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ರೌಬಿನಿ ಅವರು 2006ರಲ್ಲೇ ಎಚ್ಚರಿಸಿದ್ದರು. ಬಳಿಕ, 2008ರಲ್ಲಿ ವಸತಿ ಮಾರುಕಟ್ಟೆ ಕುಸಿತವು ವ್ಯಾಪಕ ಆರ್ಥಿಕ ಪ್ರಕ್ಷುಬ್ಧತೆ ಮತ್ತು ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಯಿತು.
ವ್ಯಾಪಾರ ಸಂಬಂಧಗಳು ಮತ್ತು ಜಾಗತಿಕ ಉತ್ಪಾದನಾ ವ್ಯವಸ್ಥೆಯಲ್ಲಿನ ಬದಲಾವಣೆಗಳಿಂದ ಭಾರತವು ಪ್ರಮುಖ ಫಲಾನುಭವಿಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ದೇಶವು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ವೇಗವನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದ್ದಾರೆ.