ಗಾಝಾ: ನೆರವು ವಿತರಣಾ ಕೇಂದ್ರದ ಬಳಿ ಇಸ್ರೇಲ್ ನಡೆಸಿದ ಗುಂಡಿನ ದಾಳಿಯಲ್ಲಿ 5 ಮಂದಿ ಮೃತ್ಯು
Photo credit: PTI
ಗಾಝಾ: ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಅಮೆರಿಕ ಬೆಂಬಲಿತ ಜಿಎಚ್‍ಎಫ್ ನೆರವು ವಿತರಣಾ ಕೇಂದ್ರದ ಬಳಿ ಇಸ್ರೇಲ್ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು 29ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಮಧ್ಯ ಗಾಝಾದಲ್ಲಿ ಜಿಎಚ್‍ಎಫ್ ಕೇಂದ್ರಕ್ಕೆ ಆಹಾರ ಸಾಮಾಗ್ರಿ ಪಡೆಯಲು ತೆರಳುತ್ತಿದ್ದವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ. ಆಹಾರ ವಿತರಣಾ ಕೇಂದ್ರದ ಬಳಿಯಿದ್ದ ಇಸ್ರೇಲ್ ಪಡೆಯತ್ತ ಧಾವಿಸುತ್ತಿದ್ದ ಶಂಕಿತರನ್ನು ನಿಯಂತ್ರಿಸಲು ಎಚ್ಚರಿಕೆಯ ಗುಂಡು ಹಾರಿಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದ್ದು ಸಾವು-ನೋವು ಸಂಭವಿಸಿರುವ ಬಗ್ಗೆ ಮಾಹಿತಿ ನೀಡಿಲ್ಲ. ಹಿಂಸಾಚಾರದ ಕಾರಣ ಕಳೆದ ವಾರ ಮುಚ್ಚಲಾಗಿದ್ದ ಎಲ್ಲಾ ನೆರವು ವಿತರಣಾ ಕೇಂದ್ರಗಳನ್ನು ರವಿವಾರ ತೆರೆಯಲಾಗಿದ್ದು ನೆರವು ವಿತರಣೆ ಸುಸೂತ್ರವಾಗಿ ನಡೆದಿದೆ. ಯಾವುದೇ ಹಿಂಸಾಚಾರ ಘಟನೆ ವರದಿಯಾಗಿಲ್ಲ ಎಂದು ಜಿಎಚ್‍ಎಫ್ ವಕ್ತಾರರು ಹೇಳಿದ್ದಾರೆ.