ಕೆನಡಾದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತ ನಿರ್ಣಯ ಅಂಗೀಕಾರ

Update: 2024-05-10 16:20 GMT

Photo : freepik

ಟೊರಂಟೊ: ಕಳೆದ ವರ್ಷದ ಜೂನ್ ನಲ್ಲಿ ನಡೆದ ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಸಂಪರ್ಕದ ಬಗ್ಗೆ ಉಲ್ಲೇಖವಿರುವ ನಿರ್ಣಯವೊಂದನ್ನು ಕೆನಡಾ ಸಂಸತ್ನ ಕೆಳಮನೆ `ಹೌಸ್ ಆಫ್ ಕಾಮನ್ಸ್' ಅಂಗೀಕರಿಸಿದೆ.

`ಕೆನಡಾ ನೆಲದಲ್ಲಿ ರಾಜಕೀಯ ಹಸ್ತಕ್ಷೇಪ, ಹಿಂಸಾಚಾರ ಅಥವಾ ಬೆದರಿಕೆ' ಎಂಬ ಶೀರ್ಷಿಕೆಯ ಈ ನಿರ್ಣಯವನ್ನು ಭಾರತೀಯ ಕೆನಡಿಯನ್ ಸಂಸದ ಸುಖ್ ಧಲಿವಾಲ್ ಫೆಬ್ರವರಿ 12ರಂದು ಸಂಸತ್ನಲ್ಲಿ ಮಂಡಿಸಿದ್ದರು. ಎಂಟು ಭಾರತೀಯ ಕೆನಡಿಯನ್ ಸಂಸದರ ಸಹಿತ ಹಲವು ಸಂಸದರು ಇದನ್ನು ಬೆಂಬಲಿಸಿದ್ದರು. 326-0 ಮತಗಳಿಂದ ನಿರ್ಣಯವನ್ನು ಅಂಗೀಕರಿಸಲಾಗಿದ್ದು ಪ್ರಧಾನಿ ಜಸ್ಟಿನ್ ಟ್ರೂಡೊ, ಹಲವು ಸಂಪುಟ ಸದಸ್ಯರು, ವಿಪಕ್ಷ ಮುಖಂಡ ಪಿಯರೆ ಪೊಲಿವ್ರೆ ನಿರ್ಣಯದ ಪರ ಮತ ಚಲಾಯಿಸಿದವರಲ್ಲಿ ಸೇರಿದ್ದಾರೆ.

`ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಕೆನಡಾದ ನೆಲದಲ್ಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ಭಾರತ ಸರಕಾರದ ಏಜೆಂಟರ ಸಂಪರ್ಕದ ಕುರಿತ ವಿಶ್ವಾಸಾರ್ಹ ಆರೋಪ ಸೇರಿದಂತೆ ಇತ್ತೀಚಿನ ಘಟನೆಗಳು ಭಾರತ, ಚೀನಾ, ರಶ್ಯ, ಇರಾನ್ ಹಾಗೂ ಇತರರಿಂದ ಭೀತಿ ಹುಟ್ಟಿಸುವುದು, ಬೆದರಿಸುವಿಕೆ ಮತ್ತು ಹಸ್ತಕ್ಷೇಪಗಳು ಹೆಚ್ಚುತ್ತಿರುವುದಕ್ಕೆ ನಿದರ್ಶನಗಳಾಗಿವೆ ಎಂಬುದನ್ನು ಸದನ ಗಮನಿಸಬೇಕು' ಎಂದು ನಿರ್ಣಯದಲ್ಲಿ ಒತ್ತಿಹೇಳಲಾಗಿದೆ.

`ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುವ, ಹಿಂಸಾಚಾರದಲ್ಲಿ ತೊಡಗಿರುವ, ಕೆನಡಾದ ಸಮುದಾಯವನ್ನು ಬೆದರಿಸುವ ಯಾವುದೇ ವ್ಯಕ್ತಿ ಅಥವಾ ವಿದೇಶಿ ಸರಕಾರದ ಏಜೆಂಟರನ್ನು ಹೊಣೆ ವಹಿಸಿಕೊಳ್ಳುವಂತೆ ನಿರ್ಣಯವು ನಿರ್ಬಂಧಿಸುತ್ತದೆ' ಎಂದು ಧಲಿವಾಲ್ ಹೇಳಿದ್ದಾರೆ.

ಆದರೆ ಈ ನಿರ್ಣಯವನ್ನು `ಕೆನಡಾ ಇಂಡಿಯಾ ಫೌಂಡೇಷನ್' ವಿರೋಧಿಸಿದ್ದು ಈ ನಿರ್ಣಯವು ಅಂಗೀಕಾರಗೊಂಡರೆ ಕೆನಡಾ-ಭಾರತ ಸಂಬಂಧಗಳನ್ನು ಹಾನಿಗೊಳಿಸುವ ಪ್ರಚೋದನೆಗಳ ಪಟ್ಟಿಗೆ ಮತ್ತೊಂದು ಉಪಕ್ರಮವಾಗಲಿದೆ' ಎಂದು ಕಳವಳ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News