ಅಮೆರಿಕದ ಡ್ರೋನ್ ಹೊಡೆದುರುಳಿಸಿದ ಹೌದಿ ಬಂಡುಕೋರರು

Update: 2024-04-29 04:55 GMT

Photo: twitter.com/starsandstripes

ಸನಾ: ಯೆಮನ್ ನ ಹೌದಿ ಬಂಡುಕೋರರು ಮತ್ತೆ ದಾಳಿ ನಡೆಸಿದ್ದು, ಹೌದಿ ದಾಳಿಯಿಂದ ತೈಲ ಟ್ಯಾಂಕರ್ ಹಾನಿಗೀಡಾಗಿದೆ ಎಂದು ವರದಿಯಾಗಿದೆ. ಗಾಝಾದಲ್ಲಿ ಇಸ್ರೇಲ್ ನ ದಾಳಿ ಮುಂದುವರಿದಿರುವ ನಡುವೆಯೇ ಹೌದಿ ಬಂಡುಕೋರರು ಅಮೆರಿಕದ ಡ್ರೋನ್ ಹೊಡೆದುರುಳಿಸಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.

ಕೆಂಪು ಸಮುದ್ರದಲ್ಲಿ ಬ್ರಿಟಿಷ್ ತೈಲ ಹಡಗು ಅಂಡ್ರೊಮೆಡಾ ಸ್ಟಾರ್ ಅನ್ನು ಗುರಿ ಮಾಡಿ ನಡೆಸಿದ ಕ್ಷಿಪಣಿ ದಾಳಿಯ ಹೊಣೆಯನ್ನು ಹೌದಿ ಸೇನಾ ವಕ್ತಾರ ಯಹ್ಯಾ ಸರೀ ಹೊತ್ತಿದ್ದಾರೆ. ಈ ಹಡಗಿಗೆ ಅಲ್ಪ ಹಾನಿಯಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ. ಆದರೆ ಅದರ ಯಾನಕ್ಕೆ ಯಾವುದೇ ತಡೆ ಉಂಟಾಗಿಲ್ಲ.

ಈ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಇಂಥ ದಾಳಿಗೆ ವಿರುದ್ಧ ಪ್ರತಿದಾಳಿ ನಡೆಸಲು ಸಾಗರ ಸೇನಾ ಕೂಟವನ್ನು ನಿಯೋಜಿಸಲಾಗಿದೆ.

ಅಮೆರಿಕ ಕಾರ್ಯಾಚರಿಸುತ್ತಿರುವ ಎಮ್ ಕ್ಯೂ-9 ರೀಪರ್ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಯಹ್ಯಾ ಸರೀ ಹೇಳಿದ್ದಾರೆ. ಯೆಮನ್ ನ ವಾಯುಪ್ರದೇಶ ಸಾದಾ ಗವರ್ನರೇಟ್ ನಲ್ಲಿ ಕಾರ್ಯಾಚರಿಸುತ್ತಿದ್ದ ವೇಳೆ ಹೊಡೆದುರುಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಅಮೆರಿಕ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಎಮ್ ಕ್ಯೂ-9 ಯೆಮನ್ ನಲ್ಲಿ ಪತನವಾಗಿರುವುದನ್ನು ಸಿಬಿಎಸ್ ನ್ಯೂಸ್ ದೃಢಪಡಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಲ್ ಜಝೀರಾ ವಿವರಿಸಿದೆ.

ಗಾಝಾದಲ್ಲಿ ಸಂಘರ್ಷ ಆರಂಭವಾದ ಬಳಿಕ ಪತನಗೊಂಡಿರುವ ಅಮೆರಿಕದ ಮೂರನೇ ಡ್ರೋನ್ ಇದಾಗಿದೆ. ಕಳೆದ ನವೆಂಬರ್ ಮತ್ತು ಫೆಬ್ರುವರಿಯಲ್ಲಿ ಇಂಥದ್ದೇ ಘಟನೆ ಸಂಭವಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News