ಇರಾನ್ ಜೊತೆ ಒಪ್ಪಂದ ಬಹುತೇಕ ಅಂತಿಮ ಹಂತದಲ್ಲಿ: ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಇರಾನ್ ಜೊತೆಗಿನ ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶದ ಅಮೆರಿಕ–ಇಸ್ರೇಲ್ ಕದನ ವಿರಾಮ ಮಾತುಕತೆಗಳು ಅಂತಿಮ ಹಂತ ತಲುಪಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ‘ತಿಳುವಳಿಕೆ ಒಪ್ಪಂದದ ಬಹುತೇಕ ಅಂಶಗಳ ಬಗ್ಗೆ ಮಾತುಕತೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತಾವಿತ ಒಪ್ಪಂದದಲ್ಲಿ ಇರಾನ್‌ನ ಪರಮಾಣು ಕಾರ್ಯಕ್ರಮದ ಭವಿಷ್ಯ, ಹಾರ್ಮುಝ್ ಜಲಸಂಧಿಯ ನಿಯಂತ್ರಣ, ಪ್ರದೇಶದಲ್ಲಿನ ಅಮೆರಿಕದ ಸೇನೆಯ ಉಪಸ್ಥಿತಿ ಹಾಗೂ ನಿರ್ಬಂಧಿಸಿರುವ ಇರಾನ್ ಹಣಕಾಸಿನ ಬಳಕೆ ಸೇರಿದಂತೆ ಹಲವು ಮಹತ್ವದ ವಿಷಯಗಳು ಸೇರಿವೆ ಎಂದು aljazeera.com ವರದಿ ಮಾಡಿದೆ.
ಶನಿವಾರ ತಮ್ಮ ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿದ ಟ್ರಂಪ್, ಹಾರ್ಮುಝ್ ಜಲಸಂಧಿಯನ್ನು ಪುನಃ ತೆರೆಯುವ ವಿಷಯವೂ ಒಪ್ಪಂದದಲ್ಲಿ ಸೇರಿದೆ ಎಂದು ಹೇಳಿದ್ದಾರೆ. ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳ ಜೊತೆಗೆ ಹಲವು ದೇಶಗಳ ಮಧ್ಯಸ್ಥಿಕೆಯಲ್ಲಿ ಅಂತಿಮ ಹಂತದ ಚರ್ಚೆಗಳು ನಡೆಯುತ್ತಿವೆ ಎಂದೂ ತಿಳಿಸಿದ್ದಾರೆ.
ಖತರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಪಾಕಿಸ್ತಾನ, ಜೋರ್ಡಾನ್, ಈಜಿಪ್ಟ್, ತುರ್ಕಿಯೆ ಹಾಗೂ ಬಹ್ರೇನ್ ನಾಯಕರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೂ ಪ್ರತ್ಯೇಕವಾಗಿ ಮಾತನಾಡಿರುವುದಾಗಿ ತಿಳಿಸಿದ್ದಾರೆ.
‘ಒಪ್ಪಂದದ ಅಂತಿಮ ವಿವರಗಳ ಬಗ್ಗೆ ಚರ್ಚೆಗಳು ಮುಂದುವರಿದಿವೆ’ ಎಂದು ಟ್ರಂಪ್ ಹೇಳಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್, ಅಮೆರಿಕ–ಇರಾನ್ ಸಂವಾದಕ್ಕೆ ತಮ್ಮ ದೇಶವು ಸಹಕಾರ ಮುಂದುವರಿಸಲಿದೆ ಎಂದು ಹೇಳಿದ್ದಾರೆ. ಭವಿಷ್ಯದ ಮಾತುಕತೆಗಳಿಗೆ ಇಸ್ಲಾಮಾಬಾದ್ ಆತಿಥ್ಯ ವಹಿಸಬಹುದು ಎಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಿದ್ದಾರೆ.
ತುರ್ಕಿಯೆ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೋಗನ್, ಮಾತುಕತೆಯ ಪ್ರಗತಿಯನ್ನು ಸ್ವಾಗತಿಸಿದ್ದು, ಯಾವುದೇ ಒಪ್ಪಂದವು ಹಾರ್ಮುಝ್ ಜಲಸಂಧಿಯ ಮೂಲಕ ಮುಕ್ತ ಸಾಗಣೆಗೆ ನೆರವಾಗಲಿದೆ ಎಂದು ಹೇಳಿದ್ದಾರೆ.
ಈಜಿಪ್ಟ್ ಅಧ್ಯಕ್ಷರು ಪ್ರತ್ಯೇಕ ಹೇಳಿಕೆಯಲ್ಲಿ, ಎಲ್ಲ ಪಕ್ಷಗಳೂ ರಾಜತಾಂತ್ರಿಕ ಮಾರ್ಗದ ಮೂಲಕ ಒಪ್ಪಂದಕ್ಕೆ ಬರಬೇಕೆಂದು ಒತ್ತಾಯಿಸಿದ್ದಾರೆ.
ಕಳೆದ ವಾರ ಟ್ರಂಪ್, ‘ಶಾಶ್ವತ ಕದನ ವಿರಾಮಕ್ಕೆ ಸಮಯ ಮೀರುತ್ತಿದೆ’ ಎಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದರು. ಬಳಿಕ ದಾಳಿಗಳನ್ನು ಪುನರಾರಂಭಿಸುವ ಹಂತಕ್ಕೆ ಪರಿಸ್ಥಿತಿ ತಲುಪಿದ್ದರೂ, ಗಲ್ಫ್ ರಾಷ್ಟ್ರಗಳ ಮನವಿಯ ಮೇರೆಗೆ ಅದನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವುದಾಗಿ ಹೇಳಿದ್ದಾರೆ.
ಈ ನಡುವೆ ಟ್ರಂಪ್ ಕೆಲವೊಮ್ಮೆ ಕಠಿಣ ಎಚ್ಚರಿಕೆಗಳನ್ನು ನೀಡುತ್ತಿದ್ದರೆ, ಮತ್ತೊಂದೆಡೆ ಒಪ್ಪಂದ ಹತ್ತಿರದಲ್ಲಿದೆ ಎಂಬ ಸಂದೇಶಗಳನ್ನೂ ನೀಡುತ್ತಿದ್ದಾರೆ. ಶನಿವಾರ ಅಮೆರಿಕದ ಧ್ವಜದಿಂದ ಆವೃತವಾದ ಇರಾನ್‌ನ ಚಿತ್ರವೊಂದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಇರಾನ್‌ಗೆ ಭೇಟಿ ನೀಡಿ ಮಾತುಕತೆ ನಡೆಸಿದ ಕೆಲವೇ ಹೊತ್ತಿನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಸೇನೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ‘ಅಂತಿಮ ತಿಳುವಳಿಕೆಗೆ ದಾರಿ ಮಾಡಿಕೊಡುವ ಉತ್ತೇಜನಕಾರಿ ಪ್ರಗತಿ ಸಾಧಿಸಲಾಗಿದೆ’ ಎಂದು ಹೇಳಲಾಗಿದೆ.
ಅಮೆರಿಕದೊಂದಿಗೆ ಮಾತುಕತೆ ನಡೆಸುವ ವಿಚಾರದಲ್ಲಿ ಟೆಹ್ರಾನ್ ಎಚ್ಚರಿಕೆಯ ನಿಲುವು ಮುಂದುವರಿಸಿದೆ. ತನ್ನ ಪರಮಾಣು ಕಾರ್ಯಕ್ರಮದ ಕುರಿತ ಮಾತುಕತೆ ನಡೆಯುತ್ತಿದ್ದ ಅವಧಿಯಲ್ಲೇ ಎರಡು ಬಾರಿ ಮಿಲಿಟರಿ ದಾಳಿ ನಡೆದಿರುವುದನ್ನು ಇರಾನ್ ಉಲ್ಲೇಖಿಸಿದೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ್ದವು.
ಬಳಿಕ ಇರಾನ್ ಹಾರ್ಮುಝ್ ಜಲಸಂಧಿಯ ಮೇಲಿನ ನಿಯಂತ್ರಣ ಮುಂದುವರಿಸಿರುವಾಗ, ಅಮೆರಿಕ ಇರಾನ್ ಬಂದರುಗಳ ಮೇಲಿನ ನಿರ್ಬಂಧ ಕ್ರಮಗಳನ್ನು ಮುಂದುವರಿಸಿದೆ.