ಇಸ್ರೇಲ್‌ನಿಂದ ವಾಯು ದಾಳಿ: ಹಲವು ಡ್ರೋನ್‌ಗಳನ್ನು ಹೊಡೆದುರುಳಿಸಿದ ಇರಾನ್‌

Update: 2024-04-19 06:28 GMT

Screengrab:X/@TRTWorldNow

ಹೊಸದಿಲ್ಲಿ: ಇಸ್ರೇಲ್‌ನಿಂದ ಇರಾನ್‌ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ಆರಂಭಗೊಂಡಿದೆ ಎಂಬ ಅಮೆರಿಕ ಮಾಧ್ಯಮಗಳ ವರದಿಗಳ ನಡುವೆ ಇರಾನ್‌ ಇಂದು ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ. ಇರಾನ್‌ನ ಇಸ್ಫಹನ್‌ ನಗರದಲ್ಲಿ ಸ್ಫೋಟದ ದೊಡ್ಡ ಸದ್ದು ಕೇಳಿ ಬಂದಿದೆ ಎಂದು ವರದಿಯಾಗಿದೆ.

ಕಳೆದ ವಾರಾಂತ್ಯದಲ್ಲಿ ಇರಾನ್‌ ತನ್ನ ಮೇಲೆ ನಡೆಸಿದ ಡ್ರೋನ್‌ ದಾಳಿಗೆ ಪ್ರತಿಯಾಗಿ ಇಸ್ರೇಲ್ ಇದೀಗ ಇರಾನ್‌ ಮೇಲೆ ದಾಳಿ ನಡೆಸಿದ್ದು, ಹಲವಾರು ನಗರಗಳಲ್ಲಿ ಇರಾನ್‌ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ.

ಇಂದು ಸ್ಫೋಟದ ಸದ್ದು ಕೇಳಿ ಬಂದ ಇಸ್ಬಹನ್‌ ನಗರದಲ್ಲಿ ಇರಾನ್‌ ಹಲವಾರು ಅಣು ಸೈಟ್‌ಗಳಿದ್ದು ಇವುಗಳಲ್ಲಿ ಇರಾನ್‌ನ ಯುರೇನಿಯಂ ಸಮೃದ್ಧೀಕರಣ ಯೋಜನೆಯ ಕೇಂದ್ರವಾಗಿರುವ ನಟನ್ಝ್‌ ಕೂಡ ಇದೆ.

ಇಸ್ರೇಲ್‌ನಿಂದ ಕ್ಷಿಪಣಿ ದಾಳಿಗಳು ನಡೆದಿವೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಇರಾನ್‌ ತಾನು ಹಲವಾರು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದಾಗಿ ಹೇಳಿದೆಯಲ್ಲದೆ ಸದ್ಯಕ್ಕೆ ಕ್ಷಿಪಣಿ ದಾಳಿ ನಡೆದಿಲ್ಲ ಎಂದು ಹೇಳಿದೆ.

ಟೆಹರಾನ್‌ನಲ್ಲಿರುವ ಇಮಾಮ್‌ ಖೊಮೇನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಇರಾನ್‌ ವಾಯು ಮಾರ್ಗದಲ್ಲಿ ಕೆಲ ಎಮಿರೇಟ್ಸ್‌ ಮತ್ತು ಫ್ಲೈದುಬೈ ವಿಮಾನಗಳು ಇಂದು ಮುಂಜಾನೆ ಹಾರಾಟ ನಡೆಸಿದರೂ ತಕ್ಷಣ ಇರಾನ್‌ ವಾಯುಮಾರ್ಗದಿಂದ ದೂರ ಸರಿದಿವೆ.

ಇರಾನ್‌ನಲ್ಲಿ ಸಂಭವಿಸಿದೆಯೆನ್ನಲಾದ ಸ್ಫೋಟಗಳ ಕುರಿತಂತೆಯೂ ಇಸ್ರೇಲ್‌ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಕಳೆದ ವಾರ ಇರಾನ್‌ ತನ್ನತ್ತ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿದ ಬೆನ್ನಿಗೇ ಪ್ರತಿಕ್ರಿಯಿಸಿದ್ದ ಇಸ್ರೇಲ್‌ ತಾನು ಪ್ರತಿದಾಳಿ ನಡೆಸುವ ಎಚ್ಚರಿಕೆ ನೀಡಿತ್ತು. ಇರಾನ್‌ನ ಹೆಚ್ಚಿನ ಡ್ರೋನ್‌ಗಳನ್ನು ಇಸ್ರೇಲ್‌ ಹೊಡೆದುರುಳಿಸಿದ್ದಾಗಿ ಹೇಳಿತ್ತು.

ಡಮಾಸ್ಕಸ್‌ನಲ್ಲಿರುವ ಇರಾನ್‌ನ ಕಾನ್ಸುಲೇಟ್‌ ಮೇಲೆ ನಡೆದ ದಾಳಿಯ ನಂತರ ಎರಡೂ ದೇಶಗಳ ನಡುವೆ ಸಂಘರ್ಷಮಯ ಸನ್ನಿವೇಶ ಸೃಷ್ಟಿಯಾಗಿದೆ. ಈ ದಾಳಿಗೆ ಇಸ್ರೇಲ್‌ ಅನ್ನು ಇರಾನ್‌ ದೂರಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News