×
Ad

ಫೆಲೆಸ್ತೀನೀಯರ ಮೇಲಿನ ವಸಾಹತುಗಾರರ ದಾಳಿಗೆ ಇಸ್ರೇಲಿ ಪಡೆಗಳ ಬೆಂಬಲ: ವಿಶ್ವಸಂಸ್ಥೆ ತನಿಖಾ ವರದಿ

Update: 2026-06-09 23:45 IST

ಸಾಂದರ್ಭಿಕ ಚಿತ್ರ | Photo Credit : AP

ವಿಶ್ವಸಂಸ್ಥೆ, ಜೂ. 9: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನೀಯರನ್ನು ಕೊಂದ, ಗಾಯಗೊಳಿಸಿದ ಅಥವಾ ಸ್ಥಳಾಂತರಗೊಳಿಸಿದ ವಸಾಹತುಗಾರರ ದಾಳಿಗಳಲ್ಲಿ ಇಸ್ರೇಲಿ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ. ದಾಳಿಯ ಸಂದರ್ಭ ವಸಾಹತುಗಾರರಿಗೆ ಇಸ್ರೇಲಿ ಪಡೆಗಳು ರಕ್ಷಣೆ ಒದಗಿಸಿವೆ ಎಂದು ವಿಶ್ವಸಂಸ್ಥೆಯ ತನಿಖಾ ವರದಿ ತಿಳಿಸಿದೆ.

ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದ ತನಿಖಾ ಆಯೋಗದ ವರದಿಯಲ್ಲಿ, ‘ನ್ಯಾಯಾಂಗ ಮತ್ತು ಕಾನೂನು ಜಾರಿ ಸಂಸ್ಥೆಗಳಿಂದ ಪ್ರೋತ್ಸಾಹಿಸಲ್ಪಟ್ಟ ನಿರ್ಭಯ ವಾತಾವರಣದಲ್ಲಿ ಇಸ್ರೇಲಿ ಅಧಿಕಾರಿಗಳು ಆರ್ಥಿಕ ಹಾಗೂ ಮಿಲಿಟರಿ ನೆರವಿನ ಮೂಲಕ ವಸಾಹತುಗಾರರ ದಾಳಿಗಳನ್ನು ಸಕ್ರಿಯಗೊಳಿಸಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ.

2023ರಿಂದ ಫೆಲೆಸ್ತೀನಿಯನ್ ಗ್ರಾಮಗಳು ಮತ್ತು ಕೃಷಿ ಭೂಮಿಗಳ ಮೇಲಿನ ದಾಳಿಗಳಲ್ಲಿ 130% ರಷ್ಟು ಏರಿಕೆಯಾಗಿದೆ. ಇಸ್ರೇಲಿ ಪಡೆಗಳು ನಿಯಮಿತವಾಗಿ ವಸಾಹತುಗಾರರೊಂದಿಗೆ ಸೇರಿ ಹಿಂಸಾಚಾರಕ್ಕೆ ರಕ್ಷಣೆ ಒದಗಿಸುತ್ತಿವೆ. ವಸಾಹತುಗಾರರ ದಾಳಿಗಳಲ್ಲಿ ಇಸ್ರೇಲಿ ಭದ್ರತಾ ಪಡೆಗಳ ಹೆಚ್ಚುತ್ತಿರುವ ಭಾಗವಹಿಸುವಿಕೆಯು ವಸಾಹತುಗಾರರು ಮತ್ತು ಸೈನಿಕರ ನಡುವಿನ ವ್ಯತ್ಯಾಸವನ್ನು ಮಸುಕಾಗಿಸಿದೆ ಎಂದು ವರದಿ ಹೇಳಿದೆ.

ಕಾನೂನುಬಾಹಿರ ಆಕ್ರಮಣ, ಫೆಲೆಸ್ತೀನೀಯರ ಸ್ಥಳಾಂತರ ಮತ್ತು ಫೆಲೆಸ್ತೀನಿಯನ್ ಭೂಪ್ರದೇಶದ ಸ್ವಾಧೀನ ಸೇರಿದಂತೆ ಆಡಳಿತದ ನೀತಿಯನ್ನು ಮುನ್ನಡೆಸಲು ಇಂತಹ ಹಿಂಸಾಚಾರವನ್ನು ಬಳಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಸಾಹತುಗಾರರಿಂದ ಫೆಲೆಸ್ತೀನಿಯನ್ ಮಕ್ಕಳ ಮೇಲಿನ ಹಲ್ಲೆಗಳು, ಅಪಹರಣ ಮತ್ತು ನಿಂದನೆಯ ಪ್ರಕರಣಗಳನ್ನು ತನಿಖಾ ಆಯೋಗ ದಾಖಲಿಸಿದೆ. ಫೆಲೆಸ್ತೀನಿಯನ್ ಮಹಿಳೆಯರಿಗೆ ಕಿರುಕುಳ ನೀಡಿರುವುದಲ್ಲದೆ, ಭಯ ಹುಟ್ಟಿಸುವ ಉದ್ದೇಶದಿಂದ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿಯೂ ಆಯೋಗ ಹೇಳಿದೆ.

2024ರ ಜುಲೈನಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ), ‘ಇಸ್ರೇಲ್‌ ನಿಂದ ಫೆಲೆಸ್ತೀನಿಯನ್ ಪ್ರದೇಶಗಳ ಆಕ್ರಮಣ ಮತ್ತು ಅಲ್ಲಿನ ವಸಾಹತುಗಳು ಕಾನೂನುಬಾಹಿರವಾಗಿದ್ದು, ಅವುಗಳನ್ನು ಆದಷ್ಟು ಬೇಗ ಹಿಂತೆಗೆದುಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟಿತ್ತು.

ನಿರಂತರ ಖಂಡನೆಗಳ ಹೊರತಾಗಿಯೂ ಇಸ್ರೇಲಿ ಅಧಿಕಾರಿಗಳು ದಾಳಿಗಳನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ.

► ಹಮಾಸ್ ನ ಉಲ್ಲಂಘನೆಗಳು

ಗಾಝಾ ಪಟ್ಟಿಯಲ್ಲಿ ಹಮಾಸ್ ಸಶಸ್ತ್ರ ಹೋರಾಟಗಾರರ ಗುಂಪಿನಿಂದ ವ್ಯಾಪಕ ಹಾಗೂ ಗಂಭೀರ ದೌರ್ಜನ್ಯಗಳು ವರದಿಯಾಗಿರುವುದು ಆತಂಕಕಾರಿ ಎಂದು ವರದಿ ಹೇಳಿದೆ.

2024ರಿಂದ 2025ರವರೆಗೆ ಗಾಝಾ ಪಟ್ಟಿಯಲ್ಲಿ ದಾಖಲಾಗಿರುವ ಮರಣದಂಡನೆ ಮತ್ತು ತೀವ್ರ ದೈಹಿಕ ಹಿಂಸೆಯ 249 ಪ್ರಕರಣಗಳಲ್ಲಿ ಕನಿಷ್ಠ 60 ಪ್ರಕರಣಗಳಲ್ಲಿ ಹಮಾಸ್ಗೆ ಸಂಬಂಧಿಸಿದ ಪಡೆಗಳು ಭಾಗಿಯಾಗಿವೆ ಎಂದು ತಿಳಿಸಲಾಗಿದೆ.

ಇಸ್ರೇಲ್ ನೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಲೋಹದ ಪೈಪ್ ನಿಂದ ಥಳಿಸುವುದು ಮತ್ತು ಮೂಳೆ ಮುರಿಯುವ ಶಿಕ್ಷೆ ವಿಧಿಸಿದ ಘಟನೆಗಳಲ್ಲೂ ಹಮಾಸ್ ಗುಂಪಿನ ಪಾತ್ರವಿದೆ ಎಂದು ಆಯೋಗದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News