×
Ad

2025ರ ಸಾಲಿನ ಭೌತ ಶಾಸ್ತ್ರ ವಿಭಾಗದ ನೋಬೆಲ್ ಪ್ರಶಸ್ತಿ ಪ್ರಕಟ : ಮೂವರು ವಿಜ್ಞಾನಿಗಳು ಆಯ್ಕೆ

Update: 2025-10-07 15:48 IST

ಜಾನ್ ಕ್ಲಾರ್ಕ್, ಮೈಕೆಲ್ ಡೆವೊರೆಟ್ ಮತ್ತು ಜಾನ್ ಮಾರ್ಟಿನಿಸ್ (Photo: X/@NobelPrize)

ಸ್ಟಾಕ್‌ಹೋಮ್,ಅ.7: 2025ರ ಸಾಲಿನ ಭೌತಶಾಸ್ತ್ರದ ನೊಬೆಲ್ ಪುರಸ್ಕಾರವನ್ನು ಮೂವರು ವಿಜ್ಞಾನಿಗಳಿಗೆ ಘೋಷಿಸಲಾಗಿದೆ. ಜಾನ್ ಕ್ಲರ್ಕ್, ಮೈಕೆಲ್ ಎಚ್.ಡೆವೊರೆಟ್ ಹಾಗೂ ಜಾನ್ ಎಂ. ಮಾರ್ಟಿನಿಸ್ ಭೌತಶಾಸ್ತ್ರದ ನೊಬೆಲ್ ಪುರಸ್ಕಾರಕ್ಕೆ ಭಾಜನರಾದ ವಿಜ್ಞಾನಿಗಳಾಗಿದ್ದಾರೆ. ವಿದ್ಯುತ್ ಸರ್ಕಿಟ್‌ನಲ್ಲಿ ಮೈಕ್ರೋಸ್ಕಾಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನೆಲಿಂಗ್ ಹಾಗೂ ಎನರ್ಜಿ ಕ್ವಾಂಟಿಸೇಶನ್‌ನ ಸಂಶೋಧನೆಗಾಗಿ ಅವರು ಈ ಪ್ರತಿಷ್ಠಿತ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

‘‘ಶತಮಾನದಷ್ಟು ಹಳೆಯದಾದ ಕ್ವಾಂಟಮ್ ಮೆಕ್ಯಾನಿಕ್ಸ್ ತಂತ್ರಜ್ಞಾನವು ನಿರಂತರವಾಗಿ ಹೊಸ ಅಚ್ಚರಿಗಳನ್ನು ನೀಡುತ್ತಲೇ ಬಂದಿದೆ. ಎಲ್ಲಾ ಡಿಜಿಟಲ್ ತಂತ್ರಜ್ಞಾನದ ತಳಹದಿಯಾಗಿಯೂ ಕ್ವಾಂಟಮ್ ಮೆಕ್ಯಾನಿಕ್ಸ್ ಅಪಾರ ಪ್ರಯೋಜನಕಾರಿಯಾಗಿದೆ. ಕಂಪ್ಯೂಟರ್ ಮೈಕ್ರೋಚಿಪ್‌ಗಳಲ್ಲಿರುವ ಟ್ರಾನ್ಸಿಸ್ಟರ್‌ಗಳು ಇದಕ್ಕೊಂದು ನಿದರ್ಶನ ಎಂದು ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಒಲ್ಲೆ ಎರಿಕ್‌ಸನ್, ಭೌತನೊಬೆಲ್ ವಿಜೇತರ ಹೆಸರುಗಳನ್ನು ಘೋಷಿಸುತ್ತಾ, ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕ್ವಾಂಟಮ್ ಕ್ರಿಪ್ಟೊಗ್ರಫಿ, ಕ್ವಾಂಟಮ್ ಕಂಪ್ಯೂಟರ್‌ಗಳು, ಕ್ವಾಂಟಮ್ ಸೆನ್ಸರ್‌ಗಳು, ಸೇರಿದಂತೆ ಮುಂದಿನ ತಲೆಮಾರಿನ ಕ್ವಾಂಟಮ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಈ ವರ್ಷದ ನೊಬೆಲ್ ಭೌತಶಾಸ್ತ್ರ ಪುರಸ್ಕಾರವು ವಿಪುಲ ಅವಕಾಶಗಳನ್ನು ಒದಗಿಸಿದೆ ಎಂದು ನೊಬೆಲ್ ಪ್ರಶಸ್ತಿ ಸಮಿತಿಯು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಸಾಲಿನ ಭೌತ ನೊಬೆಲ್ ಪುರಸ್ಕೃತರಾದ ಜಾನ್ ಕ್ಲರ್ಕ್ ಅವರು ಅಮೆರಿಕದ ಬರ್ಕಿಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಗೌರವ (ನಿವೃತ್ತ)ಪ್ರೊಫೆಸರ್ ಆಗಿದ್ದಾರೆ. ಡೆವ್ರೊಟ್ ಅವರು ಕೂಡಾ ಅಮೆರಿಕದ ಯೇಲ್ ವಿವಿಯ ಅನ್ವಯಿಕ ಭೌತಶಾಸ್ತ್ರದ ಗೌರವ ಪ್ರೊಫೆಸರ್ ಆಗಿದ್ದಾರೆ. ಮಾರ್ಟಿನಿಸ್ ಅವರು ಸಾಂತಾ ಬಾರ್ಬರಾದಲ್ಲಿರುವ ಕ್ಯಾಲಿಫೋರ್ನಿಯಾ ವಿವಿಯ ಗೌರವ ಪ್ರೊಫೆಸರ್ ಆಗಿದ್ದಾರೆ.

ಭೌತಶಾಸ್ತ್ರ ನೊಬೆಲ್ 11 ದಶಲಕ್ಷ ಸ್ವಿಡೀಶ್ ಕ್ರೊನೊರ್ ( 10 ಕೋಟಿ ರೂ.) ನಗದು ಬಹುಮಾನ ಹೊಂದಿದೆ. ಡಿಸೆಂಬರ್ 10ರಂದು ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News