×
Ad

ಅಮೆರಿಕದಲ್ಲಿ ʼನೋ ಕಿಂಗ್ಸ್ʼ ಪ್ರತಿಭಟನೆ : ಟ್ರಂಪ್ ವಿರುದ್ಧ ದೇಶಾದ್ಯಂತ ಬೀದಿಗಿಳಿದ ಲಕ್ಷಾಂತರ ಮಂದಿ

Update: 2025-10-19 12:34 IST

Photo credit: X/@BernieSanders

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳು ಮತ್ತು ಆಡಳಿತದ ವಿರುದ್ಧ "ನೋ ಕಿಂಗ್ಸ್" ಬ್ಯಾನರ್ ಹಿಡಿದು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಲಕ್ಷಾಂತರ ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ನ್ಯೂಯಾರ್ಕ್, ವಾಷಿಂಗ್ಟನ್ ಡಿಸಿ, ಚಿಕಾಗೋ, ಮಿಯಾಮಿ, ಲಾಸ್ ಏಂಜಲೀಸ್ ಸೇರಿದಂತೆ ಅಮೆರಿಕದಾದ್ಯಂತ ಶನಿವಾರ “ನೋ ಕಿಂಗ್ಸ್” ಪ್ರತಿಭಟನೆ ನಡೆದಿದೆ. ಪ್ರತಿಭಟನಾಕಾರರು ಡೊನಾಲ್ಡ್ ಟ್ರಂಪ್ ಸರಕಾರ ಸರ್ವಾಧಿಕಾರದ ಕಡೆಗೆ ವೇಗವಾಗಿ ಸಾಗುತ್ತಿದೆ ಎಂದು ಆರೋಪಿಸಿದರು.

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ʼಪ್ರತಿಭಟನೆಗಿಂತ ದೇಶಭಕ್ತಿ ಇನ್ನೊಂದಿಲ್ಲʼ ಮತ್ತು ʼಫ್ಯಾಸಿಸಂ ವಿರೋಧಿಸಿʼ ಎಂದು ಬರೆದಿರುವ ಫಲಕಗಳನ್ನು ಹಿಡಿದು ಸಾವಿರಾರು ಮಂದಿ ಮೆರವಣಿಗೆ ನಡೆಸಿದರು.

ಬಾಸ್ಟನ್, ಅಟ್ಲಾಂಟಾ ಮತ್ತು ಶಿಕಾಗೋ ನಗರಗಳಲ್ಲಿ ಕೂಡ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದರು. ನ್ಯೂಯಾರ್ಕ್‌ನಲ್ಲಿ 1,00,000ಕ್ಕೂ ಹೆಚ್ಚು ಜನರು ಸೇರಿದಂತೆ ಶನಿವಾರದ ರ್ಯಾಲಿಯಲ್ಲಿ ಸುಮಾರು 70 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು ಎಂದು ಸಂಘಟಕರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.

"ನಮ್ಮದು ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವದಲ್ಲಿ ಜನರು ಎದ್ದು ನಿಂತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ನಮ್ಮನ್ನು ಮೌನಗೊಳಿಸಲು ಸಾಧ್ಯವಿಲ್ಲ" ಎಂದು ಜೋನ್ ಪ್ರೆಸ್ ಎಂಬವರು ಅಟ್ಲಾಂಟಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಹೇಳಿದ್ದಾರೆ.

ಅಟ್ಲಾಂಟಾ ನಡೆದ ರ್ಯಾಲಿಯಲ್ಲಿ ಜಾರ್ಜಿಯಾದ ಡೆಮಾಕ್ರಟಿಕ್ ಸೆನೆಟರ್ ರಾಫೆಲ್ ವಾರ್ನಾಕ್ ಸೇರಿದಂತೆ ಹಲವರು ಭಾಷಣಕಾರರಾಗಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News