×
Ad

ಇರಾನ್‌ ವಿರುದ್ಧದ ಯುದ್ಧ ಅಂತ್ಯಕ್ಕೆ ಬಹುತೇಕ ಇಸ್ರೇಲಿಗಳ ವಿರೋಧ: IDI ಸಮೀಕ್ಷೆ

Update: 2026-05-06 10:13 IST

ಸಾಂದರ್ಭಿಕ ಚಿತ್ರ | photo credit : AP , PTI

ಟೆಹ್ರಾನ್: ಪ್ರಸ್ತುತ ಪರಿಸ್ಥಿತಿಯಲ್ಲಿ ಇರಾನ್‌ ವಿರುದ್ಧದ ಯುದ್ಧವನ್ನು ಅಂತ್ಯಗೊಳಿಸುವುದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳಿಗೆ ಅನುಕೂಲಕರವಾಗುವುದಿಲ್ಲ ಎಂದು ಬಹುತೇಕ ಇಸ್ರೇಲಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ‘ಇಸ್ರೇಲ್ ಡೆಮಾಕ್ರಸಿ ಇನ್‌ಸ್ಟಿಟ್ಯೂಟ್‌’ (ಐಡಿಐ) ನಡೆಸಿದ ಸಮೀಕ್ಷೆ ತಿಳಿಸಿದೆ.

ಸಮೀಕ್ಷೆಯ ಪ್ರಕಾರ, ಯುದ್ಧವನ್ನು ಈಗಲೇ ನಿಲ್ಲಿಸುವುದು ಇಸ್ರೇಲ್‌ನ ಭದ್ರತಾ ಹಿತಾಸಕ್ತಿಗಳಿಗೆ ಅನುಕೂಲಕರವಾಗುವುದಿಲ್ಲ ಎಂದು ಸುಮಾರು ಮೂರರಲ್ಲಿ ಎರಡು ಭಾಗದಷ್ಟು ಯಹೂದಿ ಪ್ರತಿಕ್ರಿಯಿದಾರರು ಹೇಳಿದ್ದಾರೆ. ಒಟ್ಟಾರೆ, ಶೇಕಡಾ 59 ರಷ್ಟು ಇಸ್ರೇಲಿಗಳು ಈ ಹಂತದಲ್ಲಿ ಯುದ್ಧ ಅಂತ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್‌ನ ಅರಬ್ ನಾಗರಿಕರ ಅಭಿಪ್ರಾಯಗಳಲ್ಲಿ ಮಾತ್ರ ಸ್ಪಷ್ಟ ಭಿನ್ನತೆ ಕಂಡುಬಂದಿದೆ. ಯುದ್ಧವನ್ನು ಕೊನೆಗೊಳಿಸುವುದು ಇಸ್ರೇಲ್‌ನ ಹಿತಾಸಕ್ತಿಗಳಿಗೆ ಬಹಳ ಮಟ್ಟಿಗೆ ನೆರವಾಗುತ್ತದೆ ಎಂದು ಅವರಲ್ಲಿ ಸುಮಾರು ಅರ್ಧದಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇಕಡಾ 62 ರಷ್ಟು ಮಂದಿ, ಮುಂದಿನ ದಿನಗಳಲ್ಲಿ ಇಸ್ರೇಲ್‌ ಮತ್ತು ಇರಾನ್‌ ನಡುವೆ ಮತ್ತೆ ದೊಡ್ಡ ಮಟ್ಟದ ಸಂಘರ್ಷ ಸಂಭವಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಶೇಕಡಾ 51 ರಷ್ಟು ಇಸ್ರೇಲಿಗಳು ಇಸ್ರೇಲ್‌ನ ರಕ್ಷಣಾ ನಿರ್ಧಾರಗಳ ಮೇಲೆ ತಮ್ಮ ಸರ್ಕಾರಕ್ಕಿಂತ ಅಮೆರಿಕದ ಪ್ರಭಾವವೇ ಹೆಚ್ಚು ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 2025ರ ಅಕ್ಟೋಬರ್‌ನಲ್ಲಿ ಈ ಪ್ರಮಾಣ ಶೇಕಡಾ 44 ಆಗಿತ್ತು. ಇನ್ನು, ಕೇವಲ ಶೇಕಡಾ 18 ರಷ್ಟು ಮಂದಿ ಮಾತ್ರ ಇಸ್ರೇಲ್ ಸರ್ಕಾರವೇ ಹೆಚ್ಚಿನ ಪ್ರಭಾವ ಹೊಂದಿದೆ ಎಂದು ಹೇಳಿದ್ದಾರೆ.

ಜನಾಂಗೀಯ ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ, ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇಕಡಾ 72 ರಷ್ಟು ಮಂದಿ, ಇಸ್ರೇಲ್‌ ಬಗ್ಗೆ ಅಮೆರಿಕನ್ನರಲ್ಲಿ ಹೆಚ್ಚುತ್ತಿರುವ ನಕಾರಾತ್ಮಕ ಮನೋಭಾವಗಳು ಚಿಂತೆಗೆ ಕಾರಣವಾಗಿವೆ ಎಂದು ಹೇಳಿದ್ದಾರೆ.

ಲೆಬನಾನ್‌ ವಿಚಾರದಲ್ಲಿಯೂ ಇಸ್ರೇಲಿಗಳಲ್ಲಿ ಆಶಾವಾದ ಕಡಿಮೆಯಾಗಿದೆ. ಹಿಜ್ಬೊಲ್ಲಾವನ್ನು ನಿಶಸ್ತ್ರೀಕರಣಗೊಳಿಸುವುದನ್ನು ಒಳಗೊಂಡ ಶಾಶ್ವತ ಒಪ್ಪಂದ ಸಾಧ್ಯತೆ ಬಹಳ ಕಡಿಮೆ ಅಥವಾ ಸಾಧ್ಯವಿಲ್ಲ ಎಂದು ಮೂರರಲ್ಲಿ ಎರಡು ಭಾಗದಷ್ಟು ಮಂದಿ ಹೇಳಿದ್ದಾರೆ. ಯಹೂದಿ ಪ್ರತಿಕ್ರಿಯಿದಾರರಲ್ಲಿ ಸುಮಾರು ಶೇಕಡಾ 80 ರಷ್ಟು ಮಂದಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News