×
Ad

ಆಪರೇಶನ್ ಸಿಂಧೂರ್ | ಭಾರತದ ವಿರುದ್ಧದ ಕದನದಲ್ಲಿ ಪಾಕ್‌ ಗೆ ತಾಂತ್ರಿಕ ನೆರವು ನೀಡಿದ್ದನ್ನು ಒಪ್ಪಿಕೊಂಡ ಚೀನಾ

Update: 2026-05-08 22:30 IST

Photo Credit : NDTV 

ಬೀಜಿಂಗ್, ಮೇ 9: ಕಳೆದ ವರ್ಷ ‘ಆಪರೇಶನ್ ಸಿಂಧೂರ್’ ಕಾರ್ಯಾಚರಣೆಯ ಬಳಿಕ ಭಾರತದ ಜೊತೆ ನಡೆದ ಯುದ್ಧದಲ್ಲಿ ತಾನು ಪಾಕಿಸ್ತಾನಕ್ಕೆ ಸ್ಥಳದಲ್ಲಿದ್ದೇ ತಾಂತ್ರಿಕ ಬೆಂಬಲ ಒದಗಿಸಿರುವುದಾಗಿ ಚೀನಾ ಇದೇ ಮೊದಲ ಬಾರಿಗೆ ಅಧಿಕೃತವಾಗಿ ದೃಢಪಡಿಸಿರುವುದಾಗಿ ವರದಿಯೊಂದು ಹೇಳಿದೆ.

2025ರ ಮೇನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ನಾಲ್ಕು ದಿನಗಳ ಸಂಘರ್ಷದಲ್ಲಿ ಪಾಕ್‌ ಗೆ ತಾಂತ್ರಿಕ ಬೆಂಬಲ ನೀಡುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಎನ್ನಲಾದ ಚೀನಿ ಎಂಜಿನಿಯರ್ ಝಾಂಗ್ ಹೆಂಗ್ ಅವರ ಸಂದರ್ಶನವನ್ನು ಪ್ರಸಾರ ಮಾಡಲಾಗಿದೆ.

ಝಾಂಗ್ ಅವರು ಚೆಂಗ್ಡುವಿನಲ್ಲಿರುವ ವೈಮಾನಿಕ ವಿನ್ಯಾಸ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಯು ಅತ್ಯಾಧುನಿಕ ಚೀನಿ ಫೈಟರ್ ವಿಮಾನ ಹಾಗೂ ಮಾನವರಹಿತ ವೈಮಾನಿಕ ವಾಹನಗಳನ್ನು ಅಭಿವೃದ್ಧಿಪಡಿಸುತ್ತದೆ. ಪಾಕಿಸ್ತಾನದ ವಾಯುಪಡೆಯು ಎವಿಐಸಿಯ ಅಂಗಸಂಸ್ಥೆಯೊಂದು ಉತ್ಪಾದಿಸಿರುವ ಚೀನಿ ನಿರ್ಮಿತ ಜೆ–10ಸಿಇ ಫೈಟರ್ ಜೆಟ್‌ ಗಳನ್ನು ಬಳಸುತ್ತಿದೆ.

ಚೀನಾದ ಸರಕಾರಿ ಸ್ವಾಮ್ಯದ ಸುದ್ದಿವಾಹಿನಿ ಸಿಸಿಟಿವಿ 2026ರ ಮೇ 8ರಂದು ಪ್ರಸಾರ ಮಾಡಿದ ಸಂದರ್ಶನದಲ್ಲಿ ಝಾಂಗ್ ಅವರು ಭಾರತದ ಜೊತೆಗಿನ ಸಂಘರ್ಷದ ದಿನಗಳನ್ನು ಬಣ್ಣಿಸುತ್ತಾ, ತಮ್ಮ ತಂಡವು ಪಾಕ್ ವಾಯುಪಡೆಯ ನೆಲೆಯಿಂದ ಫೈಟರ್ ಜೆಟ್‌ ಗಳು ಟೇಕ್ ಆಫ್ ಆಗುತ್ತಿರುವುದನ್ನು ಹಾಗೂ ವಾಯುದಾಳಿಯ ಸೈರನ್‌ ಗಳು ಮೊಳಗುತ್ತಿರುವುದನ್ನು ಕೇಳುತ್ತಿತ್ತೆಂದು ಹೇಳಿದ್ದಾರೆ.

ಸಂಘರ್ಷದ ಸಂದರ್ಭದಲ್ಲಿ ತಾಪಮಾನ ಸುಮಾರು 50 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿದ್ದು, ಅಲ್ಲಿ ನಿಯೋಜಿತರಾಗಿದ್ದ ಚೀನಿ ಸಿಬ್ಬಂದಿಗೆ ಮಾನಸಿಕ ಹಾಗೂ ದೈಹಿಕವಾಗಿ ಪ್ರಯಾಸಕರ ಪರಿಸ್ಥಿತಿ ಉಂಟುಮಾಡಿತೆಂದು ಅವರು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಚೀನಾವು ಪೂರೈಕೆ ಮಾಡಿರುವ ಸೇನಾ ಉಪಕರಣಗಳು ಸಂಪೂರ್ಣ ಕದನಯೋಗ್ಯ ಸಾಮರ್ಥ್ಯ ಹೊಂದಿವೆ ಎಂಬುದನ್ನು ಖಾತರಿಪಡಿಸುವ ಆಶಯದಿಂದ ತಮ್ಮ ತಂಡವು ಪ್ರೇರಿತವಾಗಿತ್ತೆಂದು ಝಾಂಗ್ ಹೇಳಿದ್ದಾರೆ. ಈ ಯುದ್ಧದ ಅನುಭವವು ಚೀನಿ ಎಂಜಿನಿಯರ್‌ಗಳು ಹಾಗೂ ಪಾಕಿಸ್ತಾನಿ ಸೇನಾ ಸಿಬ್ಬಂದಿಯ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿದೆ ಎಂದೂ ಅವರು ತಿಳಿಸಿದ್ದಾರೆ.

ಝಾಂಗ್ ಅವರ ಹೇಳಿಕೆಯು ಭಾರತ–ಪಾಕಿಸ್ತಾನ ಯುದ್ಧದಲ್ಲಿ ಚೀನಿ ಸಿಬ್ಬಂದಿ ಸಕ್ರಿಯ ಬೆಂಬಲದ ಪಾತ್ರ ವಹಿಸಿರುವುದರ ಮೊದಲ ನೇರ ದೃಢೀಕರಣವಾಗಿದೆ ಎಂದು ಬಣ್ಣಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News