ಮ್ಯಾನ್ಮಾರ್: ಜೈಲಿನಲ್ಲಿದ್ದ ಆಂಗ್‍ಸೂಕಿ ಗೃಹಬಂಧನಕ್ಕೆ ಸ್ಥಳಾಂತರ

Update: 2024-04-17 16:20 GMT

ಆಂಗ್ ಸೂಕಿ | PC : AP

ಯಾಂಗಾನ್: ಮ್ಯಾನ್ಮಾರ್ ನಾದ್ಯಂತ ಬಿಸಿಗಾಳಿ ತೀವ್ರಗೊಂಡಿರುವುದರಿಂದ ಜೈಲಿನ ಕೈದಿಗಳ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜೈಲುಶಿಕ್ಷೆಗೆ ಗುರಿಯಾಗಿರುವ ಪ್ರಜಾಪ್ರಭುತ್ವಪರ ನಾಯಕಿ ಆಂಗ್ ಸೂಕಿಯನ್ನು ಗೃಹಬಂಧನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.

ಭ್ರಷ್ಟಾಚಾರ, ಕೋವಿಡ್ 19 ನಿಯಮಗಳ ಉಲ್ಲಂಘನೆ ಸೇರಿದಂತೆ ಹಲವು ಕ್ರಿಮಿನಲ್ ಅಪರಾಧಗಳಿಗಾಗಿ 78 ವರ್ಷದ ನೊಬೆಲ್ ಪ್ರಶಸ್ತಿ ವಿಜೇತೆ ಸೂಕಿ 27 ವರ್ಷದ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ. 2021ರ ದಂಗೆಯಲ್ಲಿ ಸೇನೆಯು ಅಧಿಕಾರ ವಶಪಡಿಸಿಕೊಂಡ ಬಳಿಕ ಸೂಕಿ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿಲ್ಲ. ಜೈಲುಶಿಕ್ಷೆಗೆ ಗುರಿಯಾಗಿರುವ ಸೂಕಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ವರದಿಯಾಗಿತ್ತು.

ಇದೀಗ ಬಿಸಿಗಾಳಿಯ ಸಮಸ್ಯೆ ತೀವ್ರಗೊಂಡಿರುವುದರಿಂದ ದುರ್ಬಲ ಕೈದಿಗಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಆಂಗ್‍ಸಾನ್ ಸೂಕಿ, ಮಾಜಿ ಅಧ್ಯಕ್ಷ ವಿನ್ ಮಿಂಟ್ ಹಾಗೂ ಇತರ ಕೆಲವು ವೃದ್ಧ ಕೈದಿಗಳನ್ನು ಗೃಹ ಬಂಧನಕ್ಕೆ ಸ್ಥಳಾಂತರಿಸಲಾಗುವುದು ಎಂದು ಸೇನಾಡಳಿತದ ವಕ್ತಾರ ಝಾವ್ ಮಿನ್‍ಟುನ್ ಮಾಹಿತಿ ನೀಡಿದ್ದಾರೆ. ಸೂಕಿ ಹಲ್ಲುನೋವಿನಿಂದ ಬಳಲುತ್ತಿರುವುದರಿಂದ ಆಹಾರ ಸೇವಿಸಲು ಆಗದೆ ನಿತ್ರಾಣಗೊಂಡಿದ್ದಾರೆ. ಕಳೆದ ವಾರ ಹಲವು ಬಾರಿ ವಾಂತಿ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೂಕಿಯನ್ನು ಬಂಧನದಲ್ಲಿಡಲಾಗಿರುವ ರಾಜಧಾನಿ ನ್ಯಾಪಿಡಾವ್‍ನಲ್ಲಿ ಬುಧವಾರ ತಾಪಮಾನ 41 ಸೆಂಟಿಗ್ರೇಡ್‍ಗೆ ಏರಿಕೆಗೊಂಡಿದ್ದು ಮುಂದಿನ ವಾರ ಇನ್ನಷ್ಟು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮಧ್ಯೆ, ದೇಶದ ಹೊಸ ವರ್ಷದ ಹಬ್ಬದ ಹಿನ್ನೆಲೆಯಲ್ಲಿ 3,300 ಕೈದಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸುವುದಾಗಿ ಸೇನಾಡಳಿತ ಘೋಷಿಸಿದೆ. ಇವರಲ್ಲಿ ಇಂಡೊನೇಶ್ಯದ 13, ಶ್ರೀಲಂಕಾದ 15 ಪ್ರಜೆಗಳಿದ್ದು ಅವರನ್ನು ಗಡೀಪಾರು ಮಾಡಲಾಗುವುದು. ಉಳಿದ ಕೈದಿಗಳ ಶಿಕ್ಷಾವಧಿಯನ್ನು 6ನೇ ಒಂದರಷ್ಟು ಕಡಿತಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News