ಉಕ್ರೇನ್ ನಗರದ ಮೇಲೆ ರಶ್ಯ ಡ್ರೋನ್ ದಾಳಿ

Update: 2024-04-28 16:57 GMT

                                                                                ಸಾಂದರ್ಭಿಕ ಚಿತ್ರ

ಕೀವ್: ಉಕ್ರೇನ್‌ನ ಕಪ್ಪು ಸಮುದ್ರ ತೀರದ ನಗರ ಮಿಕೊಲೈವ್ ಮೇಲೆ ರಶ್ಯದ ಡ್ರೋನ್ ವಿಮಾನಗಳು ರವಿವಾರ ನಸುಕಿನಲ್ಲಿ ಬಾಂಬ್ ದಾಳಿ ನಡೆಸಿದ್ದು, ಹೊಟೇಲೊಂದು ಬೆಂಕಿಗಾಹುತಿಯಾಗಿದೆ ಹಾಗೂ ಅದರ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿದುಹೋಗಿದೆ ಎಂದು ಸ್ಥಳೀಯ ಗವರ್ನರ್ ವಿತಾಲಿಯಿ ಕಿಮ್ ತಿಳಿಸಿದ್ದಾರೆ. ಎರಡು ವರ್ಷಗಳಿಗೂ ಅಧಿಕ ಸಮಯದಿಂದ ನಡೆಯುತ್ತಿರುವ ಈ ಸಂಘರ್ಷದಲ್ಲಿ ಉಕ್ರೇನ್ ಸೇನೆ ಇತ್ತೀಚಿನ ದಿನಗಳಲ್ಲಿ ಶಸ್ತ್ರಾಸ್ತ್ರಗಳ ಕೊರತೆಯನ್ನು ಎದುರಿಸತೊಡಗಿದೆ.

ಉಕ್ರೇನ್ ನೌಕಾಪಡೆಯು 17 ಡ್ರೋನ್‌ಗಳನ್ನು ಜಮಾಯಿಸಿಟ್ಟಿದ್ದ ಹಡಗುಕಟ್ಟೆಯನ್ನು ಹಾಗೂ ಉಕ್ರೇನ್ ಪರವಾಗಿ ಹೋರಾಡುತ್ತಿರುವ ‘ ಇಂಗ್ಲಿಷ್ ಭಾಷಿಕ ಕೂಲಿ ಸಿಪಾಯಿಗಳು’ ತಂಗಿದ್ದ ಹೊಟೇಲನ್ನು ಗುರಿಯಿರಿಸಿ ರಶ್ಯ ಸೇನೆ ಈ ದಾಳಿಯನ್ನು ನಡೆಸಿದೆಯೆಂದು ರಶ್ಯದ ಸರಕಾರಿ ಸುದ್ದಿಸಂಸ್ಥೆ ಆರ್‌ಐಎ ವರದಿ ಮಾಡಿದೆ.

ಈ ಮಧ್ಯೆ ನೈಋತ್ಯ ರಶ್ಯದ ನಾಲ್ಕು ಪ್ರಾಂತಗಳ ಮೇಲೆ ದಾಳಿಗೆ ಯತ್ನಿಸಿದ 17 ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ತಿಳಿಸಿದೆ.

ಉಕ್ರೇನ್ ಗಡಿಯ ಉತ್ತರಕ್ಕೆ 230 ಕಿ.ಮೀ. ದೂರದ ಕೈಗಾರಿಕಾ ಪಟ್ಟಣ ಲಿಯುಡಿನೊವೊ ಮೇಲೆ ದಾಳಿಗೆ ದಾವಿಸುತ್ತಿದ್ದ ಮೂರು ಡ್ರೋನ್‌ಗಳನ್ನು ಅಡ್ಡಗಟ್ಟಲಾಗಿದೆಯೆಂದು ಗವರ್ನರ್ ವ್ಲಾಡಿಸ್ಲಾವ್ ಶಪಸಾ ತಿಳಿಸಿದ್ದಾರೆ. ಆದರೆ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ಈವರೆಗೆ ವರದಿಯಾಗಿಲ್ಲ.

ಉಕ್ರೇನ್‌ನಾದ್ಯಂತ ಶನಿವಾರ ರಾತ್ರಿಯಿಡಿ ರಶ್ಯನ್ ಸೇನೆಯ ಶೆಲ್ ದಾಳಿಗೆ ಕನಿಷ್ಠ ಏಳು ನಾಗರಿಕರು ಗಾಯಗೊಂಡಿದ್ದಾರೆಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಡೊನೆಟ್‌ಸ್ಕ್ ಹಾಗೂ ಖಾರ್ಕಿವ್ ಪ್ರಾಂತಗಳು. ರಶ್ಯನ್ ಪಡೆಗಳು ಹಾಗೂ ಉಕ್ರೇನ್ ಸೇನೆ ನಡುವೆ ಭೀಕರ ಸಂಘರ್ಷವನ್ನು ಕಂಡಿವೆ. 1 ಸಾವಿರ ಕಿ.ಮೀ. ವಿಸ್ತೀರ್ಣದ ಈ ಮುಂಚೂಣಿ ಪ್ರದೇಶವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ರಶ್ಯ ಶತಾಗತಾಯ ಯತ್ನಿಸುತ್ತಿದ್ದರೆ, ಶಸ್ತ್ರಾಸ್ತ್ರ ಕೊರತೆಯನ್ನು ಎದುರಿಸುತ್ತಿರುವ ಉಕ್ರೇನ್ ಪಡೆಗಳಿಗೆ ದಿಟ್ಟ ಪ್ರತಿರೋಧವನ್ನು ತೋರಲು ಅಡ್ಡಿಯಾಗಿದೆಯೆಂದು ವರದಿಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News