ಕ್ಯೂಬಾದಲ್ಲಿ 150 ವರ್ಷಗಳಲ್ಲೇ ಪ್ರಬಲ ಭೂಕಂಪ; ಫ್ಲೋರಿಡಾದಲ್ಲೂ ಕಂಪನ
Photo: x.com/ICR360
ಹವಾನಾ : ಕ್ಯೂಬಾ ಕರಾವಳಿಯಲ್ಲಿ ಸೋಮವಾರ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಅಮೆರಿಕದ ಫ್ಲೋರಿಡಾ ಹಾಗೂ ಮೆಕ್ಸಿಕೋದ ಕೆಲ ಭಾಗಗಳಲ್ಲೂ ಕಂಪನದ ಅನುಭವವಾಗಿದೆ.
ಕ್ಯೂಬಾದ ಮಂಟುವಾದಿಂದ 100 ಕಿಲೋಮೀಟರ್ ದೂರದಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಜಿಯಲಾಜಿಕಲ್ ಸರ್ವೇ ಹೇಳಿದೆ. 26 ಕಿಲೋಮೀಟರ್ ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ಸುಮಾರು 20 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ್ದು, ನಿವಾಸಿಗಳು ಕಟ್ಟಡಗಳಿಂದ ಬೀದಿಗಳಿಗೆ ಓಡಿಬಂದರು.
"ಆರಂಭದಲ್ಲಿ ತಲೆ ಸುತ್ತಿದಂತಾಯಿತು..ಆದರೆ ಅದು ಭೂಕಂಪವಾಗಿತ್ತು. ಇಂಥ ಅನುಭವ ಈ ಹಿಂದೆ ಎಂದೂ ಆಗಿರಲಿಲ್ಲ" ಎಂದು 47 ವರ್ಷದ ಅರ್ಥಶಾಸ್ತ್ರಜ್ಞ ಕಾರ್ಮೆಲ್ ಡೆಲ್ಗಡೊ ಹೇಳಿದರು.
ದೇಶದ ಇಡೀ ಪಶ್ಚಿಮ ಭಾಗದಲ್ಲಿ ಭೂಕಂಪದ ಅನುಭವ ಆಗಿದ್ದು, ದೂರದ ಫ್ಲೋರಿಡಾದಲ್ಲೂ ಭೂಕಂಪ ಆಗಿದೆ ಎಂದು ಕ್ಯೂಬಾದ ಅಧಿಕಾರಿಗಳು ವಿವರಿಸಿದ್ದಾರೆ.
ಕೆರಿಬಿಯನ್ ದೇಶದಲ್ಲಿ ಭೂಕಂಪ ಅಪರೂಪವಾಗಿದ್ದು, ಟೆಕ್ಟಾನಿಕ್ ಪ್ಲೇಟ್‌ನೊಳಗೇ ಇದು ಸಂಭವಿಸಿದೆ. ಇದು ಅಪರೂಪ. ಸೋಮವಾರದ ಭೂಕಂಪ 1880ರಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಬಳಿಕ ದಾಖಲಾದ ಅತ್ಯಂತ ಪ್ರಬಲ ಭೂಕಂಪ ಇದಾಗಿದೆ ಎಮದು ಯುಎಸ್ಜಿಎಸ್ ಹಿರಿಯ ಭೂಕಂಪಶಾಸ್ತ್ರ ತಜ್ಞ ಪಾಲ್ ಎರ್ಲೆ ಹೇಳಿದ್ದಾರೆ. ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.