ಪಾಕಿಸ್ತಾನದ ವಾಯುದಾಳಿಯಲ್ಲಿ ಮೂವರು ಅಫ್ಘಾನ್ ಕ್ರಿಕೆಟಿಗರು ಮೃತ್ಯು
ತ್ರಿಕೋನ ಸರಣಿಯಿಂದ ಹಿಂದೆ ಸರಿದ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ
ಕಾಬೂಲ್: ಪಕ್ತಿಕಾ ಪ್ರಾಂತ್ಯದಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಅಫ್ಘಾನ್ ದೇಶೀಯ ಕ್ರಿಕೆಟಿಗರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಪಾಕಿಸ್ತಾನ ಮತ್ತು ಶ್ರೀಲಂಕಾ ಒಳಗೊಂಡ ಮುಂಬರುವ ತ್ರಿಕೋನ T20 ಸರಣಿಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದೆ.
ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ACB, ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಈ ದಾಳಿಯನ್ನು “ಪಾಕಿಸ್ತಾನ ಆಡಳಿತದ ಹೇಡಿತನದ ಕೃತ್ಯ” ಎಂದು ಬಣ್ಣಿಸಿದೆ. ಮಾನವೀಯ ಮೌಲ್ಯಗಳ ವಿರುದ್ಧ ನಡೆದ ಈ ಕ್ರಮವು ಕ್ರೀಡಾ ಬಾಂಧವ್ಯದ ಆತ್ಮವನ್ನು ಧಿಕ್ಕರಿಸಿದೆ ಎಂದು ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ.
ನವೆಂಬರ್ 5ರಿಂದ 29ರವರೆಗೆ ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿದ್ದ ತ್ರಿಕೋನ ಸರಣಿಯಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಭಾಗವಹಿಸಬೇಕಾಗಿತ್ತು. ಆದರೆ ಪಾಕಿಸ್ತಾನದ ವಾಯುದಾಳಿಯ ಹಿನ್ನೆಲೆಯಲ್ಲಿ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಅಧಿಕೃತವಾಗಿ ಹಿಂದೆ ಸರಿಯುವುದಾಗಿ ಘೋಷಿಸಿದೆ.