NBA ಫೈನಲ್ಸ್ ಗೆ ಟ್ರಂಪ್ ಭೇಟಿ; ಭದ್ರತಾ ನಿರ್ಬಂಧಕ್ಕೆ ಅಭಿಮಾನಿಗಳ ಆಕ್ರೋಶ
ಡೊನಾಲ್ಡ್ ಟ್ರಂಪ್ | Photo Credit ; AP, PTI
ನ್ಯೂಯಾರ್ಕ್, ಜೂ. 9: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ರಾತ್ರಿ ನ್ಯೂಯಾರ್ಕ್ ನಗರದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ನಡೆದ ಅಮೆರಿಕದ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ (NBA) ಫೈನಲ್ಸ್‌ನ ಮೂರನೇ ಪಂದ್ಯಕ್ಕೆ ಹಾಜರಾಗಿದ್ದ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಕ್ರೀಡಾಂಗಣದ ಹೊರಗೆ ಆಯೋಜಿಸಲಾಗಿದ್ದ ಸಾರ್ವಜನಿಕ ಪಂದ್ಯ ವೀಕ್ಷಣಾ ಕಾರ್ಯಕ್ರಮ ರದ್ದುಗೊಂಡ ಕಾರಣ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನ್ಯೂಯಾರ್ಕ್ ನಿಕ್ಸ್ ಹಾಗೂ ಸ್ಯಾನ್ ಆಂಟೋನಿಯೊ ಸ್ಪರ್ಸ್ ನಡುವಿನ ಏಳು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಸ್ಪರ್ಸ್ 115–111 ಅಂತರದಿಂದ ಜಯಗಳಿಸಿತು. ಆದರೂ ಸರಣಿಯಲ್ಲಿ ನಿಕ್ಸ್ 2–1 ಮುನ್ನಡೆ ಕಾಯ್ದುಕೊಂಡಿದೆ.
NBA ಫೈನಲ್ಸ್ ಪಂದ್ಯಕ್ಕೆ ಹಾಜರಾದ ಮೊದಲ ಹಾಲಿ ಅಮೆರಿಕ ಅಧ್ಯಕ್ಷ ಎಂಬ ದಾಖಲೆಯನ್ನು ಟ್ರಂಪ್ ನಿರ್ಮಿಸಿದರು. ಅವರು ಕ್ರೀಡಾಂಗಣಕ್ಕೆ ಆಗಮಿಸಿದಾಗ ಕೆಲ ಅಭಿಮಾನಿಗಳು ಹರ್ಷೋದ್ಗಾರಗಳ ಮೂಲಕ ಸ್ವಾಗತಿಸಿದರೆ, ಮತ್ತೊಂದೆಡೆ ವಿರೋಧವೂ ವ್ಯಕ್ತವಾಯಿತು.
ಟ್ರಂಪ್ ಅವರ ಭೇಟಿ ಘೋಷಣೆಯಾಗುತ್ತಿದ್ದಂತೆಯೇ ನ್ಯೂಯಾರ್ಕ್‌ನಲ್ಲಿ ವಿರೋಧದ ಧ್ವನಿಗಳು ಕೇಳಿಬಂದಿದ್ದವು. ಅಧ್ಯಕ್ಷರ ಭೇಟಿಯಿಂದಾಗಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಹೊರಗೆ ಆಯೋಜಿಸಲಾಗಿದ್ದ ಸಾರ್ವಜನಿಕ ಪಂದ್ಯ ವೀಕ್ಷಣಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಇದರಿಂದ ನಿಕ್ಸ್ ತಂಡದ ಅಭಿಮಾನಿಗಳ ಅಸಮಾಧಾನ ಮತ್ತಷ್ಟು ಹೆಚ್ಚಾಯಿತು.
ಸುಮಾರು 20 ಸಾವಿರ ಆಸನಗಳ ಸಾಮರ್ಥ್ಯದ ಕ್ರೀಡಾಂಗಣಕ್ಕೆ ಆಗಮಿಸುವವರಿಗೆ ಹೆಚ್ಚುವರಿ ಭದ್ರತಾ ತಪಾಸಣೆ ಇರಲಿದೆ ಎಂದು ನಿಕ್ಸ್ ಆಡಳಿತ ಮುಂಚಿತವಾಗಿ ತಿಳಿಸಿತ್ತು. ಪಂದ್ಯ ಆರಂಭಕ್ಕೂ ಕನಿಷ್ಠ ಎರಡು ಗಂಟೆಗಳ ಮೊದಲು ಆಗಮಿಸುವಂತೆ ಹಾಗೂ ತಮ್ಮೊಂದಿಗೆ ತರಲಿರುವ ವಸ್ತುಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವಂತೆ ಅಭಿಮಾನಿಗಳಿಗೆ ಸೂಚಿಸಲಾಗಿತ್ತು.
ಟ್ರಂಪ್ ಅವರ ಹಾಜರಾತಿಯನ್ನು ಡೆಮಾಕ್ರಟಿಕ್ ಪಕ್ಷದ ನಾಯಕರು ಟೀಕಿಸಿದರು. ಹೌಸ್ ನ ಅಲ್ಪಸಂಖ್ಯಾತ ನಾಯಕ ಹಕೀಮ್ ಜೆಫ್ರಿಸ್, ‘‘ನಿಕ್ಸ್ ತಂಡದ ಅಭಿಮಾನಿಗಳು ಪಂದ್ಯವನ್ನು ಆನಂದಿಸಲು ಬಯಸುತ್ತಾರೆ. ಟ್ರಂಪ್ ನಿಜವಾಗಿಯೂ ನಿಕ್ಸ್ ತಂಡದ ಅಭಿಮಾನಿಯೇ ಎಂಬುದು ನನಗೆ ಖಚಿತವಿಲ್ಲ. ಅವರು ಯಾವಾಗಲೂ ತಮ್ಮ ‘MAGA’ ರಾಜಕೀಯ ಪ್ರಚಾರವನ್ನು ನಗರಕ್ಕೆ ತರುತ್ತಾರೆ. NBA ಫೈನಲ್ಸ್‌ನಲ್ಲಿಯೂ ತಮ್ಮನ್ನು ತಾವು ಕೇಂದ್ರಬಿಂದುವಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಹೇಳಿದರು.
ಡೆಮಾಕ್ರಟಿಕ್ ಪಕ್ಷದ ಸಂಸದೆ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕೊರ್ಟೆಜ್, ಟ್ರಂಪ್ ಅವರ ಹಾಜರಾತಿಯಿಂದಾಗಿ ಕ್ರೀಡಾಂಗಣದ ಹೊರಗೆ ನಡೆಯಬೇಕಿದ್ದ ಸಾರ್ವಜನಿಕ ಪಂದ್ಯ ವೀಕ್ಷಣಾ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳು ಅಭಿಮಾನಿಗಳಿಗೆ ಅತ್ಯಂತ ಜನಪ್ರಿಯವಾಗಿದ್ದವು ಎಂದರು.
ಆದರೆ, ಟ್ರಂಪ್ ಅವರ ಭೇಟಿಯನ್ನು ಶ್ವೇತಭವನ ಸಮರ್ಥಿಸಿಕೊಂಡಿದೆ. ‘‘ಕ್ರೀಡೆಗಳು ಅಮೆರಿಕದ ಸಂಸ್ಕೃತಿಯ ಪ್ರಮುಖ ಭಾಗ. ಅಧ್ಯಕ್ಷ ಟ್ರಂಪ್ ಕ್ರೀಡೆಗಳನ್ನು ಪ್ರೀತಿಸುತ್ತಾರೆ. 50 ವರ್ಷಗಳಿಗೂ ಹೆಚ್ಚು ಅವಧಿಯ ಬಳಿಕ NBA ಪ್ರಶಸ್ತಿ ಗೆಲ್ಲುವ ಅವಕಾಶಕ್ಕಾಗಿ ಸ್ಪರ್ಧಿಸುತ್ತಿರುವ ನಿಕ್ಸ್ ತಂಡದ ಪಂದ್ಯವನ್ನು ವೀಕ್ಷಿಸಲು ಅವರು ಉತ್ಸುಕರಾಗಿದ್ದಾರೆ’’ ಎಂದು ಶ್ವೇತಭವನದ ವಕ್ತಾರೆ ಒಲಿವಿಯಾ ವೇಲ್ಸ್ ತಿಳಿಸಿದ್ದಾರೆ. ಅಧ್ಯಕ್ಷರ ಭೇಟಿಗೆ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.
ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಕೂಡ ಪಂದ್ಯದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷರ ಭೇಟಿಗೆ ಸಂಬಂಧಿಸಿದ ಭದ್ರತಾ ಕಾರಣಗಳಿಂದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಹೊರಗೆ ಸಾರ್ವಜನಿಕ ಪಂದ್ಯ ವೀಕ್ಷಣಾ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿಲ್ಲ. ಹೀಗಾಗಿ ಅದರ ಬದಲಿಗೆ ಬ್ರ್ಯಾಂಟ್ ಪಾರ್ಕ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಗರದ ವೋಲ್ಮನ್ ರಿಂಕ್ ಹಾಗೂ ಬ್ರೂಕ್ಲಿನ್ ಬೌಲ್ ಸೇರಿದಂತೆ ಇತರೆ ಸ್ಥಳಗಳಲ್ಲಿಯೂ ಸಾರ್ವಜನಿಕ ಪಂದ್ಯ ವೀಕ್ಷಣಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಳೆದ ಶುಕ್ರವಾರ ನಡೆದ ಎರಡನೇ ಪಂದ್ಯದ ವೇಳೆ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗದ್ದಲ ಉಂಟಾಗಿ ಒಂದು ಡಜನ್‌ಗಿಂತ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಮಹಿಳೆಯೂ ಸೇರಿದ್ದರು.
ಈ ಘಟನೆಯನ್ನು ಖಂಡಿಸಿದ್ದ ಮಮ್ದಾನಿ, ನಿಕ್ಸ್ ತಂಡದ ಐತಿಹಾಸಿಕ ಫೈನಲ್ಸ್ ಪಯಣವನ್ನು ಅಭಿಮಾನಿಗಳು ಒಟ್ಟಾಗಿ ಸಂಭ್ರಮಿಸಬೇಕು. ಆದರೆ ಹಿಂಸಾಚಾರಕ್ಕೆ ಅವಕಾಶವಿಲ್ಲ ಹಾಗೂ ಪೊಲೀಸ್ ಅಧಿಕಾರಿಗಳ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ನಗರ ಪೊಲೀಸ್ ಆಯುಕ್ತೆ ಜೆಸ್ಸಿಕಾ ಟಿಶ್, ಬುಧವಾರ ನಡೆಯಲಿರುವ ನಾಲ್ಕನೇ ಪಂದ್ಯದ ವೇಳೆ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಹೊರಗೆ ಸಾರ್ವಜನಿಕ ಪಂದ್ಯ ವೀಕ್ಷಣಾ ಕಾರ್ಯಕ್ರಮಗಳನ್ನು ಪುನರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ನಿಕ್ಸ್ ತಂಡ ಸರಣಿಯನ್ನು ಗೆದ್ದರೆ, 1973ರ ಬಳಿಕ ಮೊದಲ ಬಾರಿಗೆ ಎನ್‌ಬಿಎ ಪ್ರಶಸ್ತಿ ಗೆದ್ದ ಸಾಧನೆ ಮಾಡಲಿದೆ. ಈ ನಡುವೆ, ಫೈನಲ್ಸ್ ಪಂದ್ಯಗಳ ಟಿಕೆಟ್‌ಗಳು ಕ್ರೀಡಾ ಇತಿಹಾಸದಲ್ಲೇ ಅತ್ಯಂತ ದುಬಾರಿಯಾಗಿದ್ದು, ಕೆಲವು ಕೋರ್ಟ್‌ಸೈಡ್ ಆಸನಗಳನ್ನು 10 ಲಕ್ಷ ಡಾಲರ್ ವರೆಗೆ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ.
ಹೆಚ್ಚಿನ ಟಿಕೆಟ್ ದರಗಳ ಕುರಿತು ಪ್ರಶ್ನಿಸಿದಾಗ, ‘‘ಅದು ಜೀವನದ ಭಾಗ. ದೂರದರ್ಶನದಲ್ಲಿ ಪಂದ್ಯ ವೀಕ್ಷಿಸುವುದು ಬಹುತೇಕ ಉಚಿತ’’ ಎಂದು ಟ್ರಂಪ್ ಪ್ರತಿಕ್ರಿಯಿಸಿದರು.
ಮೂರನೇ ಪಂದ್ಯಕ್ಕೂ ಮುನ್ನ ಟ್ರಂಪ್ ಅವರ ಉಪಸ್ಥಿತಿ ಕುರಿತು ಆಟಗಾರರನ್ನೂ ಪ್ರಶ್ನಿಸಲಾಯಿತು. ಸ್ಪರ್ಸ್ ತಂಡದ ಡಿ'ಆರನ್ ಫಾಕ್ಸ್, ಅಧ್ಯಕ್ಷರ ಭೇಟಿಯಿಂದ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಅನುಸರಿಸಬೇಕಾಗಿದೆ ಎಂದು ಹೇಳಿದರು. ನಿಕ್ಸ್ ಆಟಗಾರ ಒಜಿ ಅನುನೋಬಿ, ‘‘ಅವರು ಪಂದ್ಯ ವೀಕ್ಷಿಸಲು ಬಂದಿದ್ದಾರೆ. ನಾವು ಎಂದಿನಂತೆ ನಮ್ಮ ಆಟದ ಮೇಲೆ ಗಮನಹರಿಸುತ್ತೇವೆ. ಪಂದ್ಯ ಗೆಲ್ಲುವುದೇ ನಮ್ಮ ಗುರಿ’’ ಎಂದು ಪ್ರತಿಕ್ರಿಯಿಸಿದರು.
ಕಳೆದ ವರ್ಷ ಮತ್ತೆ ಶ್ವೇತಭವನಕ್ಕೆ ಮರಳಿದ ಬಳಿಕ ಟ್ರಂಪ್ ಸೂಪರ್ ಬೌಲ್, ಫಿಫಾ ಕ್ಲಬ್ ವಿಶ್ವಕಪ್ ಫೈನಲ್, ಯುಎಸ್ ಓಪನ್ ಸೇರಿದಂತೆ ಹಲವು ಪ್ರಮುಖ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ.