ಗಾಝಾ ಶಾಂತಿ ಒಪ್ಪಂದದ ವೇಳೆ ಭಾರತದ ಬಗ್ಗೆ ಟ್ರಂಪ್ ಗುಣಗಾನ!
PC: x.com/DeccanHerald
ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಜಿಪ್ಟ್ನ ಶರ್ಮ್ ಅಲ್ ಶೇಖ್ ಶೃಂಗಸಭೆಯಲ್ಲಿ ಮಾಡಿದ ಭಾಷಣದಲ್ಲಿ ಭಾರತದ ಗುಣಗಾನ ಮಾಡಿದ್ದಲ್ಲದೇ ಪ್ರಧಾನಿ ನರೇಂದ್ರ ಮೋದಿಯವರನ್ನು "ಒಳ್ಳೆಯ ಸ್ನೇಹಿತ" ಎಂದು ಬಣ್ಣಿಸಿದರು.
ಗಾಝಾದಲ್ಲಿ ಇಸ್ರೇಲ್-ಹಮಾಸ್ ಯುದ್ಧ ಕೊನೆಗೊಳಿಸುವ ಶಾಂತಿ ಒಪ್ಪಂದಕ್ಕೆ ಸಹಿ ಮಾಡಿದ ಬಳಿಕ ಮಾಡಿದ ಭಾಷಣದಲ್ಲಿ ಟ್ರಂಪ್, "ಭಾರತ ಶ್ರೇಷ್ಠ ದೇಶ ಹಾಗೂ ನನ್ನ ಒಳ್ಳೆಯ ಸ್ನೇಹಿತ ಅಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಅವರು ಅದ್ಭುತ ಕೆಲಸ ಮಾಡಿದ್ದಾರೆ" ಎಂದು ಹೇಳಿದರು. "ಭಾರತ ಹಾಗೂ ಪಾಕಿಸ್ತಾನ ಜತೆಯಾಗಿ ಒಳ್ಳೆಯ ಬದುಕು ಮುಂದುವರಿಸುತ್ತವೆ ಎಂಬ ಭಾವನೆ ನನ್ನದು" ಎಂದು ಹೇಳಿದರು. ಈ ಮೂಲಕ ಅಣ್ವಸ್ತ್ರ ಹೊಂದಿದ ಉಭಯ ದೇಶಗಳ ನಡುವಿನ ಭವಿಷ್ಯದ ಸಂಬಂಧ ಸುಮಧುರವಾಗಿರುತ್ತದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದರು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ದೂರವಾಣಿ ಸಂಭಾಷಣೆ ನಡೆಸಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಗಾಝಾ ಶಾಂತಿ ಒಪ್ಪಂದವನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕಾಗಿ ಮೋದಿಯವರು ಟ್ರಂಪ್ ಅವರನ್ನು ಅಭಿನಂದಿಸಿದ್ದರು. ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆಯೂ ಮೋದಿ ಪ್ರಸ್ತಾಪಿಸಿದ್ದರು.
"ನಾನು ನನ್ನ ಸ್ನೇಹಿತ ಅಧ್ಯಕ್ಷ ಟ್ರಂಪ್ ಜತೆಗೆ ಮಾತನಾಡಿ ಐತಿಹಾಸಿಕ ಗಾಝಾ ಶಾಂತಿ ಯೋಜನೆಯ ಯಶಸ್ಸಿಗಾಗಿ ಅಭಿನಂದಿಸಿದ್ದೇನೆ. ವ್ಯಾಪಾರ ಒಪ್ಪಂದದ ಚರ್ಚೆಯ ಬಗ್ಗೆಯೂ ಪರಾಮರ್ಶೆ ನಡೆದಿದೆ. ಮುಂದಿನ ದಿನಗಳಲ್ಲಿ ಉಭಯ ದೇಶಗಳು ನಿಕಟ ಸಂಬಂಧವನ್ನು ಮುಂದುವರಿಸಲು ಒಪ್ಪಿಕೊಂಡಿದ್ದಾರೆ" ಎಂದು ಮೋದಿ ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದ್ದರು.