×
Ad

ಗಾಝಾದ ಅಧಿಕಾರವನ್ನು ಫೆಲೆಸ್ತೀನ್‌ನ ಸಮಿತಿಯೊಂದಕ್ಕೆ ಹಸ್ತಾಂತರಿಸಲು ಹಮಾಸ್ ಸಿದ್ಧವಿದೆ : ತುರ್ಕಿಯೆ ವಿದೇಶಾಂಗ ಸಚಿವ ಹಕನ್ ಫಿದಾನ್

Update: 2025-11-04 20:38 IST

Photo: aljazeera

ಅಂಕಾರ, ನ.4: ಗಾಝಾದ ಅಧಿಕಾರವನ್ನು ಫೆಲೆಸ್ತೀನಿಯನ್ ಸಮಿತಿಯೊಂದಕ್ಕೆ ಹಸ್ತಾಂತರಿಸಲು ಹಮಾಸ್ ಸಿದ್ಧವಿದೆ ಎಂದು ತುರ್ಕಿಯೆ ವಿದೇಶಾಂಗ ಸಚಿವ ಹಕನ್ ಫಿದಾನ್ ಹೇಳಿದ್ದಾರೆ.

ಕದನ ವಿರಾಮವನ್ನು ಮುಂದುವರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ನಡೆದ ಅರಬ್ ಮತ್ತು ಮುಸ್ಲಿಮ್ ರಾಷ್ಟ್ರಗಳ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಫಿದಾನ್ ` ಒಪ್ಪಂದವು ಫೆಲೆಸ್ತೀನ್‌ ಜನರ ಹಕ್ಕುಗಳನ್ನು ರಕ್ಷಿಸುತ್ತದೆ ಎಂಬ ವಿಶ್ವಾಸದಲ್ಲಿ ಗಾಝಾದ ಆಡಳಿತವನ್ನು ಫೆಲೆಸ್ತೀನೀಯರನ್ನು ಒಳಗೊಂಡ ಸಮಿತಿಗೆ ವಹಿಸಲು ಹಮಾಸ್ ಸಿದ್ಧವಾಗಿದೆ. ಫೆಲೆಸ್ತೀನ್‍ನ ಆಡಳಿತವನ್ನು ಫೆಲೆಸ್ತೀನೀಯರೇ ನಿರ್ವಹಿಸಬೇಕು ಮತ್ತು ತಮ್ಮ ಭದ್ರತೆಯನ್ನು ತಾವೇ ಖಚಿತಪಡಿಸಿಕೊಳ್ಳಬೇಕು ಎಂಬ ತತ್ವಕ್ಕೆ ತುರ್ಕಿಯೆ ಬೆಂಬಲವಿದೆ' ಎಂದು ಹೇಳಿದ್ದಾರೆ. ಯುಎಇ, ಇಂಡೋನೇಶ್ಯಾ, ಖತರ್, ಪಾಕಿಸ್ತಾನ, ಸೌದಿ ಅರೆಬಿಯಾ ಮತ್ತು ಜೋರ್ಡಾನ್‍ನ ಉನ್ನತ ನಿಯೋಗಗಳು ಸಭೆಯಲ್ಲಿ ಪಾಲ್ಗೊಂಡಿದ್ದವು.

ಗಾಝಾದ ಭವಿಷ್ಯದ ಭದ್ರತೆಗೆ ಬೆಂಬಲವನ್ನು ಒದಗಿಸಲು ಅಂತರಾಷ್ಟ್ರೀಯ ಸ್ಥಿರೀಕರಣ ಪಡೆಯ ಸ್ವರೂಪದ ಬಗ್ಗೆ ಚರ್ಚೆ ಮುಂದುವರಿಯುತ್ತಿದೆ. ಅಂತಾರಾಷ್ಟ್ರೀಯ ಪಡೆಯಲ್ಲಿ ಪಾಲ್ಗೊಳ್ಳುವ ದೇಶಗಳು ಪಡೆಯ ಕೆಲಸ ಮತ್ತು ಜವಾಬ್ದಾರಿಯನ್ನು ವಿವರಿಸುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯವನ್ನು ಬಯಸುತ್ತಿವೆ. ಈ ನಿರ್ಣಯವನ್ನು ಆಧರಿಸಿ ಅಂತಾರಾಷ್ಟ್ರೀಯ ಪಡೆಯಲ್ಲಿ ಯಾವ ರೀತಿಯಲ್ಲಿ ಪಾಲ್ಗೊಳ್ಳಬಹುದು ಎಂದು ರಾಷ್ಟ್ರಗಳು ನಿರ್ಧರಿಸುತ್ತವೆ. ನಾವು ಎಲ್ಲಾ ರೀತಿಯ ತ್ಯಾಗಕ್ಕೂ ಸಿದ್ಧವಿದ್ದೇವೆ. ಆದರೆ ಭದ್ರತಾ ಮಂಡಳಿಯ ನಿರ್ಣಯವು ನಮ್ಮ ಸಹಾಯದ ಸ್ವರೂಪವನ್ನು ನಿರ್ಧರಿಸುತ್ತದೆ. ಫೆಲೆಸ್ತೀನ್ ವಿಷಯಕ್ಕೆ ಸಂಬಂಧಿಸಿದ ಭದ್ರತಾ ಮಂಡಳಿಯ ನಿರ್ಣಯವು ಹಾಲಿ ಸಮಸ್ಯೆಯನ್ನು ಬಗೆಹರಿಸುವ ಜೊತೆಗೆ ಭವಿಷ್ಯದಲ್ಲಿ ಯಾವುದೇ ಸಮಸ್ಯೆಗಳಿಗೆ ರಚನಾತ್ಮಕ ಆಧಾರಗಳನ್ನು ರಚಿಸಬಾರದು' ಎಂದು ಹಕಾನ್ ಫಿದಾನ್ ಹೇಳಿರುವುದಾಗಿ ವರದಿಯಾಗಿದೆ.

ತುರ್ಕಿಯೆ ಮತ್ತು ಖತರ್ ಇತ್ತೀಚಿನ ವಾರಗಳಲ್ಲಿ ಹಮಾಸ್ ಜೊತೆ ನಿಕಟ ಸಂಪರ್ಕದಲ್ಲಿದ್ದು ಅಧಿಕಾರ ಹಸ್ತಾಂತರಿಸುವ ಅಗತ್ಯದ ಬಗ್ಗೆ ಹಮಾಸ್‍ಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ಹೇಳಿವೆ.

ಇಸ್ರೇಲ್ ದಾಳಿಯಲ್ಲಿ ಇಬ್ಬರ ಮೃತ್ಯು

ಉತ್ತರ ಗಾಝಾದ ಜಬಾಲಿಯಾದಲ್ಲಿ ಇಸ್ರೇಲ್ ಸೇನೆಯ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದರೆ, ಗಾಝಾ ನಗರದ ಹೊರವಲಯದಲ್ಲಿ ನಡೆದ ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಮೃತಪಟ್ಟು ಒಬ್ಬರು ಗಂಭೀರವಾಗಿ ಗಾಯಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಅಲ್-ಜಝೀರಾ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News