ರಫಾದಿಂದ 80 ಸಾವಿರ ಫೆಲೆಸ್ತೀನೀಯರ ಸ್ಥಳಾಂತರ : ವಿಶ್ವಸಂಸ್ಥೆ ವರದಿ

Update: 2024-05-09 16:30 GMT

Photo : PTI

ಗಾಝಾ : ದಕ್ಷಿಣ ಗಾಝಾದ ರಫಾ ನಗರದ ಮೇಲೆ ಇಸ್ರೇಲ್ ಸೇನೆ ಆಕ್ರಮಣ ತೀವ್ರಗೊಳಿಸಿದ ಬಳಿಕ ಕಳೆದ 3 ದಿನಗಳಲ್ಲಿ ರಫಾದಿಂದ ಸುಮಾರು 80,000 ಫೆಲೆಸ್ತೀನೀಯರು ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ ಗುರುವಾರ ವರದಿ ಮಾಡಿದೆ.

`ಮೇ 6ರಂದು ಇಸ್ರೇಲ್‍ನ ಮಿಲಿಟರಿ ಕಾರ್ಯಾಚರಣೆ ತೀವ್ರಗೊಂಡ ಬಳಿಕ ಸುಮಾರು 80,000 ಜನರು ರಫಾವನ್ನು ಬಿಟ್ಟು ಬೇರೆಡೆ ಆಶ್ರಯ ಪಡೆದಿದ್ದಾರೆ. ಯಾವುದೇ ಪ್ರದೇಶವೂ ಸುರಕ್ಷಿತವಾಗಿಲ್ಲ. ಈ ಕುಟುಂಬದವರ ಅವಸ್ಥೆ ಶೋಚನೀಯವಾಗಿದೆ ' ಎಂದು ಫೆಲಸ್ತೀನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಪರಿಹಾರ ಮತ್ತು ನೆರವು ಏಜೆನ್ಸಿ (ಯುಎನ್‍ಆರ್‍ಡಬ್ಲ್ಯೂಎ) ಹೇಳಿದೆ.

ರಫಾದ ಮುಖ್ಯ ಆಸ್ಪತ್ರೆಯನ್ನು ಮುಚ್ಚಿರುವುದರಿಂದ ಅಸ್ವಸ್ಥಗೊಂಡವರು, ಗಾಯಾಳುಗಳು ವೈದ್ಯಕೀಯ ಸೇವೆಯಿಂದ ವಂಚಿತರಾಗಿದ್ದಾರೆ. ಇಂಧನ ಹಾಗೂ ಇತರ ಪೂರೈಕೆಗಳೂ ಸ್ಥಗಿತಗೊಂಡಿರುವುದರಿಂದ ಇಲ್ಲಿಯ ಜನಸಮುದಾಯ ಅಂತರರಾಷ್ಟ್ರೀಯ ನೆರವನ್ನು ಅವಲಂಬಿಸಿದೆ. ಆದರೆ ರಫಾವನ್ನು ಈಜಿಪ್ಟ್ ಗೆ ಸಂಪರ್ಕಿಸುವ ಪ್ರಮುಖ ಗಡಿದಾಟು(ಬಾರ್ಡರ್ ಕ್ರಾಸಿಂಗ್) ಇಸ್ರೇಲ್ ಪಡೆಗಳ ನಿಯಂತ್ರಣಕ್ಕೆ ಬಂದಿದ್ದು ರಫಾದ ಮೇಲೆ ಪೂರ್ಣಪ್ರಮಾಣದ ಆಕ್ರಮಣದ ಸಾಧ್ಯತೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವುದರಿಂದ ರಫಾ ನಿವಾಸಿಗಳಲ್ಲಿ ಆತಂಕ ಮಡುಗಟ್ಟಿದೆ.

ಭಾಗಶಃ ನಾಶಗೊಂಡಿರುವ ಖಾನ್ ಯೂನಿಸ್ ನಗರ, ಅಥವಾ ಅದನ್ನು ದಾಟಿ ಉತ್ತರ ಗಾಝಾ ಅಥವಾ ಇಸ್ರೇಲ್ ಘೋಷಿಸಿರುವ ಮುವಾಸಿ ನಗರದ ಮಾನವೀಯ ವಲಯಕ್ಕೆ ಸ್ಥಳಾಂತರಗೊಳ್ಳುವ ಮೂರು ಆಯ್ಕೆ ರಫಾ ನಿವಾಸಿಗಳ ಎದುರಿದೆ. ಮೆಡಿಟರೇನಿಯನ್ ತೀರದ ಬಳಿಯ ಮುವಾಸಿ ನಗರದಲ್ಲಿ ಸ್ಥಾಪಿಸಿರುವ ಮಾನವೀಯ ಕಾರಿಡಾರ್‍ನಲ್ಲಿ ಈಗಾಗಲೇ ಸುಮಾರು 4,50,000 ಜನತೆ ಆಶ್ರಯ ಪಡೆದಿದ್ದಾರೆ. ಆದರೆ ತ್ಯಾಜ್ಯ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆಯಿಲ್ಲ ಮತ್ತು ಶುದ್ಧ ನೀರಿನ ಕೊರತೆಯಿದೆ. ತಾಪಮಾನ 38 ಡಿಗ್ರಿ ಸೆಲ್ಶಿಯಸ್‍ನಷ್ಟು ಇರುವುದರಿಂದ ನಿರ್ಜಲೀಕರಣದ ಸಮಸ್ಯೆ ಎದುರಾಗಲಿದೆ ಎಂದು ವಿಶ್ವಸಂಸ್ಥೆ ಮೂಲಗಳು ವರದಿ ಮಾಡಿದೆ. ರಫಾದ ಮೇಲೆ ಆಕ್ರಮಣಕ್ಕೆ ಸಿದ್ಧತೆ ನಡೆಸುತ್ತಿರುವ ಇಸ್ರೇಲ್, ನಾಗರಿಕರ ರಕ್ಷಣೆ ಹಾಗೂ ಸ್ಥಳಾಂತರದ ಬಗ್ಗೆ ವಿಶ್ವಾಸಾರ್ಹ ಯೋಜನೆಯನ್ನು ಒದಗಿಸಿಲ್ಲ ಎಂದು ಅಮೆರಿಕ ಆಕ್ಷೇಪಿಸಿದೆ.

ಮೂಲಸೌಕರ್ಯದ ಕೊರತೆ

ಗಾಝಾ ಯುದ್ಧದ ಮೊದಲು ರಫಾ 2,50,000 ನಿವಾಸಿಗಳನ್ನು ಹೊಂದಿತ್ತು. ಯುದ್ಧ ತೀವ್ರಗೊಳ್ಳುತ್ತಿದ್ದಂತೆಯೇ ಗಾಝಾದ್ಯಂತದ ಜನತೆ ರಫಾದಲ್ಲಿ ಆಶ್ರಯ ಪಡೆದ ಹಿನ್ನೆಲೆಯಲ್ಲಿ ಜನಸಂಖ್ಯೆ 14 ಲಕ್ಷಕ್ಕೆ ತಲುಪಿತು. ಮೂಲ ಸೌಕರ್ಯದ ಕೊರತೆಯಿರುವ ರಫಾದಲ್ಲಿ ಖಾಲಿಜಾಗ ಇದ್ದ ಕಡೆಯಲ್ಲಿ ಟೆಂಟ್‍ಗಳನ್ನು ಸ್ಥಾಪಿಸಲಾಗಿದೆ ಮತ್ತು ಶಾಲೆಗಳಲ್ಲೂ ಆಶ್ರಯ ಪಡೆದಿದ್ದಾರೆ. ಗಾಝಾದ ಬಹುತೇಕ ಪ್ರದೇಶಗಳಂತೆಯೇ ಇಲ್ಲಿನ ನಿವಾಸಿಗಳೂ ಆಹಾರ, ನೀರು, ಇಂಧನ ಹಾಗೂ ಇತರ ದೈನಂದಿನ ಅಗತ್ಯಗಳಿಗೆ ಅಂತರರಾಷ್ಟ್ರೀಯ ನೆರವನ್ನು ಎದುರು ನೋಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News