ಸುಂಕ ತಪ್ಪಿಸಲು ಚೀನಾಕ್ಕೆ ಭಾರತವೂ ಸೇರಿ 40 ದೇಶಗಳ ನೆರವು: ಅಮೆರಿಕ ಆರೋಪ
ಸಾಂದರ್ಭಿಕ ಚಿತ್ರ | Photo Credit : magnific.com
ವಾಷಿಂಗ್ಟನ್, ಆ. 14: ಅಮೆರಿಕದ ಭಾರಿ ಸುಂಕಗಳಿಂದ ಚೀನಾ ತಪ್ಪಿಸಿಕೊಳ್ಳಲು ನೆರವಾಗುತ್ತಿರುವ ‘ನೆರಳು ಜಾಲ’ದಲ್ಲಿ ಭಾರತವೂ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳು ಭಾಗಿಯಾಗಿವೆ ಎಂದು ಅಮೆರಿಕ ಆರೋಪಿಸಿದೆ.
‘ದೊಡ್ಡ ಪ್ರಮಾಣದ ಮರುಸಾಗಣೆ ಹಗರಣ’ ಎಂಬ ಶೀರ್ಷಿಕೆಯ ವರದಿಯನ್ನು ಅಧ್ಯಕ್ಷ ಟ್ರಂಪ್ ಅವರ ಉನ್ನತ ವ್ಯಾಪಾರ ಸಲಹೆಗಾರ ಪೀಟರ್ ನವಾರೊ ಬಿಡುಗಡೆ ಮಾಡಿದ್ದಾರೆ. ಮೂರನೇ ದೇಶಗಳ ಮೂಲಕ ಮರುನಿರ್ದೇಶಿಸಲಾದ ಈ ಸರಕುಗಳ ಮೌಲ್ಯವು ವಾರ್ಷಿಕವಾಗಿ ಸುಮಾರು 303 ಶತಕೋಟಿ ಅಮೆರಿಕನ್ ಡಾಲರ್ಗಳಷ್ಟಿರಬಹುದು ಎಂದು ವರದಿ ಅಂದಾಜಿಸಿದೆ. ಚೀನಾದ ‘ಷ್ಯಾಡೋ ಟ್ರಾನ್ಸ್ಶಿಪ್ಮೆಂಟ್ ನೆಟ್ವರ್ಕ್’ ಎಂದು ಹೆಸರಿಸಲಾದ ಈ ಪಟ್ಟಿಯಲ್ಲಿ ಅಮೆರಿಕದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರಗಳೂ ಸೇರಿವೆ. ಮೆಕ್ಸಿಕೋ, ಕೆನಡಾ, ಯುರೋಪಿಯನ್ ಯೂನಿಯನ್, ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾಗಳು ಈ ಸಾಲಿನಲ್ಲಿವೆ.
ಚೀನಾದ ಸರಕುಗಳನ್ನು ಸಣ್ಣಪುಟ್ಟ ಸಂಸ್ಕರಣೆ, ಮರು-ಲೇಬಲಿಂಗ್, ಮರು-ಪ್ಯಾಕೇಜಿಂಗ್, ಮರು-ಇನ್ವಾಯ್ಸಿಂಗ್ ಅಥವಾ ಸಾಗಣೆ ಮಾರ್ಗ ಬದಲಾವಣೆಯ ನೆಪದಲ್ಲಿ ಇತರ ದೇಶಗಳ ಮೂಲಕ ರವಾನಿಸಲಾಗುತ್ತಿತ್ತು. ಸರಕಿನಲ್ಲಿ ಬಹುಪಾಲು ಚೀನಾದ ಸಾಮಗ್ರಿಗಳೇ ಇದ್ದರೂ, ಅದು ಬೇರೆ ದೇಶದ ಉತ್ಪನ್ನ ಎಂಬಂತೆ ಬಿಂಬಿಸಲಾಗುತ್ತಿತ್ತು. ಈ ವರದಿಯಲ್ಲಿ ಭಾರತದ ಪುಣೆ–ಗುಜರಾತ್–ಚೆನ್ನೈ ಉತ್ಪಾದನಾ ವಲಯವನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ.