ಹಾರ್ಮುಝ್ ಜಲಸಂಧಿ ಬಳಿ ಅಮೆರಿಕದ ಅಪಾಚೆ ಹೆಲಿಕಾಪ್ಟರ್ ಪತನ
ಇಬ್ಬರು ಪೈಲಟ್ ಗಳು ಸುರಕ್ಷಿತ: ಡೊನಾಲ್ಡ್ ಟ್ರಂಪ್
ಸಾಂದರ್ಭಿಕ ಚಿತ್ರ (PTI)
ವಾಷಿಂಗ್ಟನ್: ಹಾರ್ಮುಝ್ ಜಲಸಂಧಿ ಸಮೀಪ ಅಮೆರಿಕ ಸೇನೆಯ AH–64 ಅಪಾಚೆ ಹೆಲಿಕಾಪ್ಟರ್ ಸೋಮವಾರ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಇಬ್ಬರು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಹಾರ್ಮುಝ್ ಜಲಸಂಧಿ ಬಳಿ ಅಮೆರಿಕ ಸೇನೆಯ ಎಎಚ್–64 ಅಪಾಚೆ ಹೆಲಿಕಾಪ್ಟರ್ ಪತನಗೊಂಡಿದ್ದು, ಅದರಲ್ಲಿದ್ದ ಇಬ್ಬರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಇಬ್ಬರೂ ಸುರಕ್ಷಿತರಾಗಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಹೆಲಿಕಾಪ್ಟರ್ ಇರಾನಿನ ಗುಂಡಿನ ದಾಳಿಗೆ ತುತ್ತಾಗಿತ್ತೇ, ಯಾಂತ್ರಿಕ ದೋಷ ಸಂಭವಿಸಿತ್ತೇ ಅಥವಾ ಕಾರ್ಯಾಚರಣೆಯ ವೇಳೆ ಬೇರೆ ಸಮಸ್ಯೆ ಎದುರಿಸಿತ್ತೇ ಎಂಬುದರ ಕುರಿತು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಘಟನೆಗೆ ಸಂಬಂಧಿಸಿದ ತನಿಖೆ ಮುಂದುವರಿದಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಹಲವು ದಿನಗಳ ಮಿಲಿಟರಿ ಸಂಘರ್ಷದ ಬಳಿಕ ಜಾರಿಯಲ್ಲಿರುವ ಕದನ ವಿರಾಮದ ನಡುವೆಯೇ ಈ ಅಪಘಾತ ಸಂಭವಿಸಿದೆ.
ಹಾರ್ಮುಝ್ ಜಲಸಂಧಿಯ ಮೂಲಕ ಇರಾನ್ ವಾಣಿಜ್ಯ ಹಡಗುಗಳ ಸಂಚಾರವನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸುವ ಪ್ರಯತ್ನಗಳನ್ನು ಎದುರಿಸಲು ಅಮೆರಿಕ ತನ್ನ ಕಾರ್ಯಾಚರಣೆಗಳನ್ನು ಮುಂದುವರಿಸಿದೆ. ಈ ಕಾರ್ಯಾಚರಣೆಗಳ ಭಾಗವಾಗಿ MQ–9 ರೀಪರ್ ಡ್ರೋನ್ ಗಳು, F/A–18 ಹಾಗೂ F–35 ಯುದ್ಧ ವಿಮಾನಗಳ ಜೊತೆಗೆ ಅಪಾಚೆ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.
ಫೆಬ್ರುವರಿ 28ರಂದು ಸಂಘರ್ಷ ಆರಂಭವಾದ ಬಳಿಕ ಇರಾನ್ ಸುಮಾರು 30 MQ–9 ರೀಪರ್ ಡ್ರೋನ್ ಗಳನ್ನು ಹೊಡೆದುರುಳಿಸಿದೆ ಎಂದು ವರದಿ ಹೇಳಿದೆ. ಅಲ್ಲದೆ, ಹಲವಾರು ಅಮೆರಿಕ ಯುದ್ಧ ವಿಮಾನಗಳು ಪ್ರತಿಕೂಲ ಅಥವಾ ತಪ್ಪಾಗಿ ತಮ್ಮದೇ ಪಡೆಯಿಂದ ನಡೆದ ದಾಳಿಯಿಂದ ಕಳೆದುಹೋಗಿವೆ. ಈ ಅಪಘಾತ ದೃಢಪಟ್ಟರೆ, ಸಂಘರ್ಷದ ಅವಧಿಯಲ್ಲಿ ಕಳೆದುಹೋದ ಮೊದಲ ಅಪಾಚೆ ಹೆಲಿಕಾಪ್ಟರ್ ಇದಾಗಲಿದೆ.
ಕಳೆದ ತಿಂಗಳು ‘ಪ್ರಾಜೆಕ್ಟ್ ಫ್ರೀಡಂ’ ಕಾರ್ಯಾಚರಣೆಯಡಿ ವಾಣಿಜ್ಯ ಹಡಗುಗಳಿಗೆ ಭದ್ರತೆ ಒದಗಿಸುವ ಅಮೆರಿಕ ನೌಕಾಪಡೆಯ ಪ್ರಯತ್ನದ ಭಾಗವಾಗಿ, ಪಡೆಯ ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ಹಾರ್ಮುಝ್ ಜಲಸಂಧಿ ಮತ್ತು ಸುತ್ತಮುತ್ತಲಿನ ಜಲಪ್ರದೇಶಗಳ ಮೇಲೆ ವೈಮಾನಿಕ ಪರಿಶೀಲನೆ ನಡೆಸಿದ ಚಿತ್ರಗಳನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ ಹಂಚಿಕೊಂಡಿತ್ತು.
ಹೆಲ್‌ಫೈರ್ ಕ್ಷಿಪಣಿಗಳಿಂದ ಸಜ್ಜುಗೊಂಡಿರುವ AH–64 ಅಪಾಚೆ ಹೆಲಿಕಾಪ್ಟರ್ ಗಳು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಹೆಚ್ಚು ಯುದ್ಧ ವಿಮಾನಗಳಲ್ಲಿ ಒಂದಾಗಿವೆ. ಹಡಗು ಮಾರ್ಗಗಳಲ್ಲಿ ಗಸ್ತು ತಿರುಗುವುದು, ಸಣ್ಣ ದೋಣಿಗಳ ದಾಳಿಯನ್ನು ತಡೆಯುವುದು ಮತ್ತು ಪ್ರತಿಕೂಲ ಡ್ರೋನ್ ಗಳನ್ನು ಪ್ರತಿಬಂಧಿಸುವ ಕಾರ್ಯಗಳಿಗೆ ಇವುಗಳನ್ನು ಬಳಸಲಾಗುತ್ತಿದೆ.
ಹಾರ್ಮುಝ್ ಜಲಸಂಧಿಯ ಮೂಲಕ ಸಮುದ್ರ ಸಂಚಾರವನ್ನು ಪುನರಾರಂಭಗೊಳಿಸುವ ಉದ್ದೇಶದಿಂದ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಮಾತುಕತೆಗಳು ನಡೆಯುತ್ತಿದ್ದರೂ, ಅಪಾಚೆ ಹೆಲಿಕಾಪ್ಟರ್ ಗಳು ಹಾರ್ಮುಝ್ ಜಲಸಂಧಿ ಹಾಗೂ ಪರ್ಷಿಯನ್ ಕೊಲ್ಲಿಯಲ್ಲಿರುವ ಇರಾನ್ ನಿಯಂತ್ರಿತ ದ್ವೀಪಗಳ ಸಮೀಪ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿ ತಿಳಿಸಿದೆ.
ಇರಾನ್‌ನ ದಿಗ್ಬಂಧನ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕ ಎಪ್ರಿಲ್ ನಲ್ಲಿ ಇರಾನಿನ ಬಂದರುಗಳಿಗೆ ಪ್ರವೇಶದ ಮೇಲೆ ನಿರ್ಬಂಧ ಹೇರಿತ್ತು. ಆ ಬಳಿಕ ಅಮೆರಿಕ ನೌಕಾಪಡೆ 130ಕ್ಕೂ ಹೆಚ್ಚು ಹಡಗುಗಳನ್ನು ಹಿಂದಿರುಗಿಸಿದ್ದು, ಮಾರ್ಗ ಬದಲಿಸುವ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ಹಲವಾರು ಹಡಗುಗಳನ್ನು ತಡೆದಿವೆ ಎಂದು ವರದಿಯಾಗಿದೆ.
ಈ ವರ್ಷದ ಆರಂಭದಲ್ಲಿ ಇರಾನ್ ಹೊಡೆದುರುಳಿಸಿದ F–15e ಸ್ಟ್ರೈಕ್ ಈಗಲ್ ಯುದ್ಧವಿಮಾನದ ಇಬ್ಬರು ಸಿಬ್ಬಂದಿ ತಮ್ಮ ವಿಮಾನದಿಂದ ಜಿಗಿದು ಪಾರಾಗಿದ್ದರು. ಪ್ರತಿಕೂಲ ಪ್ರದೇಶದ ಒಳಭಾಗದಲ್ಲಿ ಇಳಿದಿದ್ದ ಅವರನ್ನು ಬಳಿಕ ಸುರಕ್ಷಿತವಾಗಿ ರಕ್ಷಿಸಲಾಗಿತ್ತು.