ಪನ್ನುನ್ ಪ್ರಕರಣದ ದಾಖಲೆಗಳನ್ನು ದಿಲ್ಲಿ ನ್ಯಾಯಾಲಯಗಳಿಗೆ ಕಳುಹಿಸುವಂತೆ ಅಮೆರಿಕ ಕೋರ್ಟ್ ಆದೇಶ
Photo: NDTV
ನ್ಯೂಯಾರ್ಕ್: ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿ ದಾಖಲೆಗಳನ್ನು ದಿಲ್ಲಿಯ ಮೂರು ಜಿಲ್ಲಾ ನ್ಯಾಯಾಲಯಗಳಿಗೆ ಕಳುಹಿಸುವಂತೆ ಅಮೆರಿಕದ ನ್ಯಾಯಾಲಯ ಆದೇಶಿಸಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಮತ್ತು ಮಾಜಿ ರಾ ಮುಖ್ಯಸ್ಥ ಸಾಮಂತ್ ಗೋಯಲ್ ಅವರಿಗೆ ಈ ದಾಖಲೆಗಳನ್ನು ತಲುಪಿಸುವ ಸಲುವಾಗಿ ಈ ಆದೇಶ ಹೊರಡಿಸಲಾಗಿದೆ.
ಪನ್ನುನ್ ದಾಖಲಿಸಿರುವ ಅರ್ಜಿಯನ್ನು ಭಾರತ ಈಗಾಗಲೇ ತಿರಸ್ಕರಿಸಿದ್ದು, ಇದೊಂದು ‘ಕಟ್ಟುಕಥೆ ಮತ್ತು ದುರುದ್ದೇಶದಿಂದ ಕೂಡಿದ ಪ್ರಕರಣ’ ಎಂದು ಹೇಳಿದೆ.
ದೋವಲ್ ಅವರಿಗೆ ತಲುಪಿಸಬೇಕಾದ ಸಮನ್ಸ್ ಮತ್ತು ನ್ಯಾಯಾಲಯದ ದಾಖಲೆಗಳನ್ನು ಪಟಿಯಾಲ ಹೌಸ್ ಜಿಲ್ಲಾ ನ್ಯಾಯಾಲಯಕ್ಕೆ ಕಳುಹಿಸುವಂತೆ ನ್ಯೂಯಾರ್ಕ್‌ನ ಸದರ್ನ್ ಡಿಸ್ಟ್ರಿಕ್ಟ್ ನ್ಯಾಯಾಲಯದ ನ್ಯಾಯಾಧೀಶರು ಸೂಚಿಸಿದ್ದಾರೆ. ಸಾಮಂತ್ ಗೋಯಲ್ ಅವರಿಗೆ ತಲುಪಿಸಲು ದ್ವಾರಕಾ ಮತ್ತು ತೀಸ್ ಹಜಾರಿ ಜಿಲ್ಲಾ ನ್ಯಾಯಾಲಯಗಳಿಗೆ ದಾಖಲೆಗಳನ್ನು ಕಳುಹಿಸುವಂತೆ ಆದೇಶಿಸಲಾಗಿದೆ.
ಪ್ರತಿವಾದಿಗಳು ವಾಸಿಸುವ ಪ್ರದೇಶದ ವ್ಯಾಪ್ತಿಗೆ ಬರುವ ಭಾರತೀಯ ನ್ಯಾಯಾಲಯಗಳಿಗೆ ಈ ದಾಖಲೆಗಳನ್ನು ಅಂತಾರಾಷ್ಟ್ರೀಯ ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಳೆದವಾರ ಅಮೆರಿಕದ ವಿದೇಶಾಂಗ ಇಲಾಖೆ ಪನ್ನುನ್ ದಾಖಲಿಸಿರುವ ಸಿವಿಲ್ ಮೊಕದ್ದಮೆಯ ದಾಖಲೆಗಳನ್ನು ರಾಜತಾಂತ್ರಿಕ ಮಾರ್ಗದ ಮೂಲಕ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ರವಾನಿಸಿತ್ತು. ಮತ್ತೊಂದೆಡೆ, ದೋವಲ್ ಮತ್ತು ಗೋಯಲ್ ಅವರಿಗೆ ಭಾರತೀಯ ನ್ಯಾಯಾಲಯಗಳ ಮೂಲಕ ಸಮನ್ಸ್ ತಲುಪಿಸಲು ನ್ಯೂಯಾರ್ಕ್ ನ್ಯಾಯಾಲಯ ಅನುಮತಿ ನೀಡಿತ್ತು.
2023ರಲ್ಲಿ ನ್ಯೂಯಾರ್ಕ್‌ನಲ್ಲಿರುವ ತಮ್ಮ ನಿವಾಸದ ಬಳಿ ಹತ್ಯೆ ಮಾಡಲು ಭಾರತೀಯ ಅಧಿಕಾರಿಗಳು ಸಂಚು ರೂಪಿಸಿದ್ದರು ಎಂದು ಪನ್ನುನ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಸಂಬಂಧಪಟ್ಟವರಿಗೆ ಅಧಿಕೃತವಾಗಿ ಮಾಹಿತಿ ತಲುಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಎರಡು ಬೆಳವಣಿಗೆಗಳು ನಡೆದಿವೆ.