ಹಮಾಸ್ ನಿಶ್ಯಸ್ತ್ರೀಕರಣದ ಬಳಿಕವಷ್ಟೇ ಯುದ್ಧಕ್ಕೆ ಕೊನೆ: ನೆತನ್ಯಾಹು
PC: x.com/MobilePunch
ಗಾಝಾ: ಹಮಾಸ್ ನ ಸಂಪೂರ್ಣ ನಿಶ್ಯಸ್ತ್ರೀಕರಣ ಸೇರಿದಂತೆ ಎರಡನೇ ಹಂತದ ಕದನ ವಿರಾಮ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ಗಾಜಾ ಮೇಲಿನ ಯುದ್ಧ ಸ್ಥಗಿತವಾಗಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.
"ಎರಡನೇ ಹಂತದಲ್ಲಿ ಹಮಾಸ್ ನ ನಿಶ್ಶಸ್ತ್ರೀಕರಣ ಅಥವಾ ಗಾಝಾ ಪಟ್ಟಿಯನ್ನು ಸಂಪೂರ್ಣ ಸೇನೆಯಿಂದ ಮುಕ್ತವಾಗಿಸುವುದು ಉದ್ದೇಶ. ಆ ಬಳಿಕ ಹಮಾಸ್ ತನ್ನೆಲ್ಲ ಶಸ್ತ್ರಾಸ್ತ್ರಗಳನ್ನು ತೊರೆಯಬೇಕು" ಎಂದು ಬಲಪಂಥೀಯ ವಾಹಿನಿ ಚಾನಲ್ 14ಗೆ ನೀಡಿದ ಸಂದರ್ಶನದಲ್ಲಿ ನೆತನ್ಯಾಹು ಹೇಳಿದ್ದಾರೆ. ಇದು ಯಶಸ್ವಿಯಾಗಿ ಮುಗಿದಾಗ ಮಾರ್ಗ ಸುಲಭವಾಗಲಿದೆ; ಆದರೆ ಅದು ಆಗದೇ ಇದ್ದಲ್ಲಿ ದಾರಿ ದುರ್ಗಮವಾಗಿ ಬಳಿಕ ಯುದ್ಧ ಕೊನೆಗೊಳ್ಳುತ್ತದೆ" ಎಂದು ಎಚ್ಚರಿಕೆ ನೀಡಿದರು.
ಏತನ್ಮಧ್ಯೆ ಗಾಝಾ ಮತ್ತು ಈಜಿಪ್ಟ್ ನಡುವಿನ ರಫ್ಹಾ ಗಡಿ ಮುಂದಿನ ನೋಟಿಸ್ ನೀಡುವವರೆಗೆ ಮುಚ್ಚಿರುತ್ತದೆ ಎಂದು ಇಸ್ರೇಲ್ ಪ್ರಕಟಿಸಿದೆ. ಗಾಝಾಗೆ ಮರಳುವ ಜನರಿಗಾಗಿ ಗಡಿ ಸೋಮವಾರ ತೆರೆಯಲಿದೆ ಎಂದು ಈಜಿಪ್ಟ್ ನಲ್ಲಿರುವ ಫೆಲೆಸ್ತೀನ್ ರಾಯಭಾರಿ ಹೇಳಿಕೆ ನೀಡಿದ್ದಾರೆ. ಉಳಿದ ಎಲ್ಲ 28 ಮೃತ ಒತ್ತೆಯಾಳುಗಳನ್ನು ಮರಳಿಸುವ ತನ್ನ ಕದನ ವಿರಾಮ ಪಾತ್ರವನ್ನು ಹಮಾಸ್ ಹೇಗೆ ನಿರ್ವಹಿಸುತ್ತದೆ ಎನ್ನುವುದರ ಮೇಲೆ ಗಡಿ ಮರು ತೆರೆಯುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ನೆತನ್ಯಾಹು ಕಚೇರಿ ಪ್ರಕಟಣೆ ನೀಡಿದೆ.
ಇದುವರೆಗೆ ಹಮಾಸ್ 10 ಒತ್ತೆಯಾಳುಗಳ ಕಳೇಬರವನ್ನು ಹಸ್ತಾಂತರಿಸಿದೆ. ಉಳಿದುದರಲ್ಲಿ ಎರಡು ಮೃತದೇಹಗಳನ್ನು ಶನಿವಾರ ರಾತ್ರಿ ಹಸ್ತಾಂತರಿಸುವುದಾಗಿ ಹಮಾಸ್ ತಿಳಿಸಿತ್ತು.