×
Ad

ನೆರವಿಗೆ ತಡೆ ಗಾಝಾದಲ್ಲಿ ಕ್ಷಾಮದ ಅಪಾಯ ಹೆಚ್ಚಿಸುತ್ತಿದೆ: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ

Update: 2025-05-19 21:36 IST

PC : aljazeera.com

ಜಿನೆವಾ: ಗಾಝಾ ಪಟ್ಟಿಯಲ್ಲಿ ಎರಡು ದಶಲಕ್ಷ ಜನರು ಹಸಿವಿನಿಂದ ಬಳಲುತ್ತಿದ್ದು, ಸಹಾಯವನ್ನು ಉದ್ದೇಶಪೂರ್ವಕವಾಗಿ ನಿರ್ಬಂಧಿಸಿರುವುದು ಬರಗಾಲದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಸೋಮವಾರ ಎಚ್ಚರಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರ ವಿಶ್ವಸಂಸ್ಥೆ ಏಜೆನ್ಸಿಗಳು ಫೆಲೆಸ್ತೀನಿಯನ್ ಪ್ರದೇಶವನ್ನು ಪ್ರವೇಶಿಸಲು ಅನುಮತಿ ದೊರೆತೊಡನೆ ಸಹಾಯವನ್ನು ತಲುಪಿಸಲು ಸಿದ್ಧವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಹೇಳಿದ್ದಾರೆ. ಇತ್ತೀಚಿನ ದಿಗ್ಬಂಧನ ಸುಮಾರು ಎರಡು ತಿಂಗಳುಗಳಿಂದ ಮುಂದುವರಿದಿದ್ದು ಎರಡು ದಶಲಕ್ಷ ಜನರು ಹಸಿವಿನಿಂದ ಬಳಲುತ್ತಿದ್ದಾರೆ. 1,60,000 ಮೆಟ್ರಿಕ್ ಟನ್ ಗಳಷ್ಟು ಆಹಾರವನ್ನು ಗಡಿಯಲ್ಲಿ ತಡೆಹಿಡಿಯಲಾಗಿದೆ. ಆಹಾರ ಸೇರಿದಂತೆ ಮಾನವೀಯ ಸಹಾಯವನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿರುವುದು ಗಾಝಾದಲ್ಲಿ ಬರಗಾಲದ ಅಪಾಯವನ್ನು ಹೆಚ್ಚಿಸಿದೆ.

ಹೆಚ್ಚುತ್ತಿರುವ ಹಗೆತನ, ಸ್ಥಳಾಂತರಿಸುವ ಆದೇಶಗಳು, ಸುರಕ್ಷಿತ ಪ್ರದೇಶಗಳ ಪ್ರಮಾಣ ಕಡಿಮೆಯಾಗುತ್ತಿರುವುದು ಈಗಾಗಲೇ ಹದಗೆಟ್ಟಿರುವ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಅಪಾಯಕ್ಕೆ ದೂಡಿದೆ. ಔಷಧಗಳು ಗಡಿಭಾಗದಲ್ಲಿ ತಡೆಯುತ್ತಿದ್ದಂತೆಯೇ ಜನರು ತಡೆಗಟ್ಟಬಹುದಾದ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ಆಸ್ಪತ್ರೆಗಳ ಮೇಲಿನ ದಾಳಿಯು ಜನರ ಆರೋಗ್ಯ ಕಾಳಜಿಯನ್ನು ನಿರಾಕರಿಸುತ್ತದೆ ಎಂದು ವಾರ್ಷಿಕ ವಿಶ್ವ ಆರೋಗ್ಯ ಅಧಿವೇಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಘೆಬ್ರಯೇಸಸ್ ಹೇಳಿದ್ದಾರೆ.

2023ರ ನವೆಂಬರ್ನಿಂದ 617 ಕ್ಯಾನ್ಸರ್ ರೋಗಿಗಳು ಸೇರಿದಂತೆ 7,300ಕ್ಕೂ ಅಧಿಕ ರೋಗಿಗಳನ್ನು ಗಾಝಾ ಪಟ್ಟಿಯಿಂದ ವೈದ್ಯಕೀಯ ಸ್ಥಳಾಂತರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ನೆರವಾಗಿದೆ. ಆದರೆ ಇನ್ನೂ 10 ಸಾವಿರಕ್ಕೂ ಅಧಿಕ ರೋಗಿಗಳಿಗೆ ವೈದ್ಯಕೀಯ ಸ್ಥಳಾಂತರದ ಅಗತ್ಯವಿದೆ. ಸದಸ್ಯ ರಾಷ್ಟ್ರಗಳು ಹೆಚ್ಚು ರೋಗಿಗಳನ್ನು ಸ್ವೀಕರಿಸುವಂತೆ ಮತ್ತು ಇಸ್ರೇಲ್ ಈ ಸ್ಥಳಾಂತರಕ್ಕೆ ಅವಕಾಶ ಮಾಡುವಂತೆ, ತುರ್ತು ಅಗತ್ಯವಿರುವ ಆಹಾರ ಮತ್ತು ಔಷಧಗಳು ಗಾಝಾ ಪ್ರವೇಶಿಸಲು ಅನುವು ಮಾಡಿಕೊಡುವಂತೆ ಒತ್ತಾಯಿಸುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News