×
Ad

ಕಲಬುರಗಿ| ಎಸ್.ಬಿ ಕಾಲೇಜಿನಲ್ಲಿ ವಿಶ್ವ ಮಣ್ಣಿನ ದಿನಾಚರಣೆ

Update: 2025-12-07 23:01 IST

ಕಲಬುರಗಿ: ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗ ಹಾಗೂ ಇಕೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ರವಿವಾರ ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಮಣ್ಣು ಎಂದರೆ ಕೇವಲ ಧೂಳು ಅಥವಾ ಭೂಪರದೆ ಅಲ್ಲ, ಅದರಲ್ಲಿ ಕಾಣುವ ಹಾಗೂ ಕಾಣದ ಅನೇಕ ಜೀವಿಗಳು ಹಾಗೂ ಜೀವಾಣುಗಳು ವಾಸಿಸುತ್ತಿದ್ದು, ಮಣ್ಣಿನೊಂದಿಗೆ ಮಾನವನ ನೇರ ಸಂಬಂಧವಿದೆ ಎಂದು ಹೇಳಿದರು.

ಭೂಮಿಯ ಜೀವವಲಯದಲ್ಲಿ ಮಣ್ಣು ಅತ್ಯಂತ ಮೌಲ್ಯಯುತ ಮತ್ತು ಮೂಲಭೂತ ಸಂಪನ್ಮೂಲವಾಗಿದ್ದು, ಕೃಷಿಯ ಆಧಾರವೇ ಮಣ್ಣು. ಆದರೆ ಯಾಂತ್ರಿಕ ಅಭಿವೃದ್ಧಿ, ರಾಸಾಯನಿಕಗಳ ಅತಿಯಾದ ಬಳಕೆ, ಅರಣ್ಯ ನಾಶ, ಮಣ್ಣು ಕೊರೆತ ಹಾಗೂ ಮಾಲಿನ್ಯದ ಪರಿಣಾಮವಾಗಿ ಮಣ್ಣಿನ ಆರೋಗ್ಯ ಹದಗೆಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರತಿ ವರ್ಷ ಡಿಸೆಂಬರ್ 5ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸುವುದರ ಉದ್ದೇಶ ಮಣ್ಣಿನ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಪೋಷಕಾಂಶಯುಕ್ತ ಆಹಾರ ಪಡೆಯಲು ಮಣ್ಣಿನಲ್ಲೇ ಸತ್ವ ಇರಬೇಕು ಎಂದು ಡಾ. ಜ್ಯೋತಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಸ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕಿ ಡಾ. ಶೈಲಾ ಹಿರೇಮಠ, ಈ ವರ್ಷದ ವಿಶ್ವ ಮಣ್ಣಿನ ದಿನದ ಧ್ಯೇಯವಾಕ್ಯ “ಆರೋಗ್ಯಕರ ಮಣ್ಣು, ಆರೋಗ್ಯಕರ ನಗರಗಳು” (Healthy Soils for Healthy Cities) ಆಗಿದ್ದು, ಮಣ್ಣಿನ ಸುಸ್ಥಿರ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಕೋ ಕ್ಲಬ್ ಸಂಯೋಜಕರಾದ ಡಾ. ಅಂಬಿಕಾ, ಓಂಕಾರ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News