ಸಾಂದರ್ಭಿಕ ಚಿತ್ರ

ಕಲಬುರಗಿ : ನಗರದ ಸರಾಫ್ ಬಜಾರ್‌ ಪ್ರದೇಶದ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮಮ್ತಾಜ್ಜುಲ್ ಮಲೀಕ್ ಎಂಬಾತನನ್ನು ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಓರ್ವನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಅಂತರರಾಷ್ಟ್ರೀಯ ಜಾಲದ ಸಂಪರ್ಕ ಇರುವ ಪ್ರಕರಣಗಳಲ್ಲಿ ಮಾಹಿತಿ ಒಂದೇ ಇಲಾಖೆಗೆ ಸೀಮಿತವಾಗಿರುವುದಿಲ್ಲ. ಹೀಗಾಗಿ ಕೇಂದ್ರ ಸರಕಾರದ ಸಹಕಾರದೊಂದಿಗೆ ತನಿಖೆ ಮುಂದುವರಿಸಲಾಗುತ್ತಿದೆ ಎಂದರು.

ಕಾರ್ಖಾನೆಗಳು, ಉದ್ಯಮಗಳು ಹಾಗೂ ಇತರ ಸಂಸ್ಥೆಗಳಲ್ಲಿ ಹೊರರಾಜ್ಯಗಳ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವಾಗ ಅವರ ಹಿನ್ನೆಲೆಯನ್ನು ಪರಿಶೀಲಿಸುವುದು ಅಗತ್ಯ ಎಂದು ಹೇಳಿದ ಸಚಿವರು, ಉದ್ಯೋಗ ನೀಡುವವರು ಸ್ಥಳೀಯ ಪೊಲೀಸ್ ಠಾಣೆಗಳ ಮೂಲಕ ಅಗತ್ಯ ಮಾಹಿತಿ ಪಡೆದು, ನೇಮಕಾತಿಗೂ ಮುನ್ನ ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು.

ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಿರ್ದಿಷ್ಟ ವೆಬ್‌ಸೈಟ್‌ಗಳು ಹಾಗೂ ಖಾತೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದು ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿರುತ್ತದೆ. ಇಂತಹ ಚಟುವಟಿಕೆಗಳ ಮೇಲೆಯೂ ನಿಗಾ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಭದ್ರತಾ ವಿಚಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ರಾಜಕೀಯ ಮಾಡುವುದರಿಂದ ದೇಶದ ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಹೊರರಾಜ್ಯಗಳಿಂದ ಬಂದಿರುವ ಕೆಲ ವ್ಯಕ್ತಿಗಳಿಗೆ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕವಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಪ್ರಕರಣದ ಸಂಪೂರ್ಣ ವಿವರಗಳು ತನಿಖೆಯಿಂದ ಹೊರಬರಬೇಕಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor