ಸಂಚಾರ ನಿಯಮಗಳು ಅನುಸರಿಸಿದರೆ ಅಪಘಾತ ತಡೆಯಲು ಸಾಧ್ಯ: ಗೌಸ್ ಮಹಮ್ಮದ್ ಖಾನ್
ಕಲಬುರಗಿ: ಸಾರ್ವಜನಿಕ ರಸ್ತೆಯಲ್ಲಿ ಸಾಗುವಾಗ ವಾಹನಗಳು ಮತ್ತು ಪಾದಚಾರಿಗಳು ಸಂಚಾರ ನಿಯಮಗಳನ್ನು ಅನುಸರಿಸಿದರೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಸಂಚಾರಿ ಪೊಲೀಸ್ ಸ್ಟೇಷನ್ ಪಿಎಸ್‌ಐ ಗೌಸ್ ಮಹಮ್ಮದ್ ಖಾನ್ ಅವರು ತಿಳಿಸಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಎನ್‌ಎಸ್‌ಎಸ್ ವಿಭಾಗದ ವತಿಯಿಂದ ಸಂಚಾರಿ ನಿಯಮಗಳ ಜಾಗೃತಿ ಕುರಿತು ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ವಾಹನ ನಡೆಸುವುದು ಮುಖ್ಯವಲ್ಲ ಅದರ ಜೊತೆಗೆ ರಸ್ತೆ ನಿಮಯಗಳ ಪಾಲನೆಯೂ ಬಹಳ ಮುಖ್ಯವಾಗಿದೆ. ಸರಿಯಾಗಿ ಪಾಲಿಸದಿದ್ದರೆ ಅಪಘಾತ ಸಂಭವಿಸುತ್ತವೆ. ಕಾನೂನು ಕಾಯ್ದೆಗಳು ಜನ ಸಾಮಾನ್ಯರ ಹಿತದೃಷ್ಟಿಯಿಂದ ಜಾರಿಗೆ ತಂದಿರುವುದು. ವಾಹನ ಚಾಲನೆ ಮಾಡುವಾಗ ಚಾಚೂ ತಪ್ಪದೆ ಹೆಲ್ಮೇಟ್ ಹಾಗೂ ಸಂಚಾರಿ ನಿಯಮ ಪಾಲನೆ ಮಾಡಿದ್ದಲ್ಲಿ ಅಪಘಾತ ತಪ್ಪುವ ಜತೆಗೆ ದಂಡ ತೆರವುದು ಮತ್ತು ಪ್ರಾಣ ಹಾನಿ ತಪ್ಪಿಸಬಹುದು. ನಿಯಮಗಳನ್ನು ಬಹುತೇಖ ಯುವಜನತೆ ಜತೆ ವಿದ್ಯಾವಂತರೇ ಮೀರುತ್ತಿದ್ದಾರೆಂಬುದು ವಿಷಾದನೀಯ. ಈ ನಿಟ್ಟಿನಲ್ಲಿ ಇಲಾಖೆ ಸೂಚಿಸುವ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಸಂಚಾರಿ ಪೋಲಿಸ್ ಅಧಿಕಾರಿ ಗಂಗಾಧರ ರಾಠೋಡ್ ಮಾತನಾಡಿ, ಲೈಸನ್ಸ್ ಪಡೆಯುವುದು, ವಾಹನಗಳ ಇನ್ಸುರೆನ್ಸ್ ಮಾಡಿಸುವುದರ ಕುರಿತು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಹೆಲ್ಮೆಟ್ ಧರಿಸುವುದು, ಚಾಲನೆ ವೇಳೆ ಮೊಬೈಲ್ ಬಳಕೆ ಬಳಸದಿರುವುದು, ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್, ಸೀಟ್ ಬೆಲ್ಟ್ ಧರಿಸುವುದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿನಿಯರು ಅತಿ ವೇಗದಲ್ಲಿ ವಾಹನ ಚಲಿಸುವುದನ್ನು ತಪ್ಪಿಸಿ ಇಲ್ಲದಿದ್ದರೆ ಅಪಘಾತಗಳು ಸಂಭವಿಸುತ್ತವೆ. ಸಂಚಾರಿ ನಿಯಮಗಳು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಎಂದು ಕರೆ ನೀಡಿದರು.
ವೇದಿಕೆ ಮೇಲೆ ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ.ಮೀಲಿಂದ ಸುಳ್ಳದ್, ಕಲ್ಪನಾ ಡಿ.ಎಮ್, ಐಕ್ಯೂಎಸಿ, ನ್ಯಾಕ್ ಸಂಯೋಜಕರಾದ ಡಾ.ಸಿದ್ಧಲಿಂಗರೆಡ್ಡಿ ಮತ್ತಿತರರು ಇದ್ದರು.
ಕು. ಅಂಬಿಕಾ ಸ್ವಾಗತಿಸಿದರು, ಕು.ಜವೇರಿಯಾ ಅಂಜುಮ್ ನಿರೂಪಿಸಿದರೆ ಕು.ದಾನೇಶ್ವರಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.