Afzalpur | ಬರ ಪರಿಹಾರ, ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಅಫಜಲಪುರ : ರಾಜ್ಯದಲ್ಲಿ ನಿರ್ಮಾಣವಾಗಿರುವ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರೈತರ ನೆರವಿಗೆ ಸರ್ಕಾರ ತಕ್ಷಣ ಧಾವಿಸಬೇಕು. ರೈತರ ಸಾಲ ಮನ್ನಾ ಮಾಡುವುದರ ಜೊತೆಗೆ ಹಿಂಗಾರು ಬಿತ್ತನೆಗೆ ಉಚಿತವಾಗಿ ಬೀಜ ಮತ್ತು ರಸಗೊಬ್ಬರ ವಿತರಿಸಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಆಗ್ರಹಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ, ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಸೊನ್ನ ಬ್ಯಾರೇಜ್ ಮೂಲಕ ಅವೈಜ್ಞಾನಿಕವಾಗಿ ಆಳಂದ ತಾಲೂಕಿನ ಅಮರ್ಜಾ ಜಲಾಶಯ ಹಾಗೂ ಕೆರೆಗಳನ್ನು ತುಂಬಿಸಲಾಗುತ್ತಿದೆ. ಅಫಜಲಪುರ ತಾಲೂಕಿನಲ್ಲಿಯೂ ತೀವ್ರ ಬರಗಾಲವಿದ್ದರೂ, ಸೊನ್ನ ಬ್ಯಾರೇಜ್‌ನಿಂದ ಆಳಂದ ತಾಲೂಕಿನ ಕೆರೆಗಳಿಗೆ ನೀರು ಹರಿಸುತ್ತಿರುವುದು ಅಫಜಲಪುರ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಮಾತನಾಡಿ, ಈ ಭಾಗದಲ್ಲಿ ಶೇ.65ರಷ್ಟು ಮಳೆ ಕೊರತೆ ಎದುರಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಸೊನ್ನ ಬ್ಯಾರೇಜ್ ನೀರಾವರಿ ಯೋಜನೆಗೆ ಭಾರೀ ಅನುದಾನ ವೆಚ್ಚವಾಗಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದು ಹೇಳಿದರು.
ಅಫಜಲಪುರ ತಾಲೂಕಿನ ರೈತರಿಗೆ ನೀರಿನ ಕೊರತೆ ಇರುವಾಗ ಪಕ್ಕದ ಆಳಂದ ತಾಲೂಕಿಗೆ ನೀರು ಹರಿಸುವುದು ಸರಿಯಲ್ಲ. ರೈತರ ಸಾಲ ಮನ್ನಾ ಹಾಗೂ ಬರ ಪರಿಹಾರಕ್ಕಾಗಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ತಾಲೂಕಿನ ಹಿತಾಸಕ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ನೀರು ಹರಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡ ವಿಶ್ವನಾಥ ರೇವೂರ ಮಾತನಾಡಿ, ಮಾಶಾಳ-3 ಹಾಗೂ ಕರಜಗಿ-1 ಕೆರೆ ತುಂಬುವ ಯೋಜನೆಗಳು ಪೂರ್ಣಗೊಂಡು ವರ್ಷಗಳಾದರೂ ಕೆರೆಗಳನ್ನು ಸಮರ್ಪಕವಾಗಿ ತುಂಬಿಸಲು ಸಾಧ್ಯವಾಗಿಲ್ಲ. ಚುನಾವಣೆ ಸಮೀಪಿಸಿದಾಗ ಮಾತ್ರ ಅಭಿವೃದ್ಧಿ ಹೆಸರಿನಲ್ಲಿ ಕಾಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ವಿದ್ಯಾಧರ ಮಂಗಳೂರೆ ಸೇರಿದಂತೆ ಪಕ್ಷದ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಅಶೋಕ ಬಗಲಿ, ರಮೇಶ ಬಾಕೆ, ಬಸವರಾಜ ವಾಳಿ, ಸುನೀಲ್ ಶೆಟ್ಟಿ, ಚಂದಮ್ಮ ಪಾಟೀಲ, ಶರಣು ಪದಕಿ, ಧಾನು ಪತಾಟೆ, ಶೈಲೇಶ ಗುಣಾರಿ, ಶಿವಶರಣಪ್ಪ ಪಡಶೆಟ್ಟಿ, ಸುಭಾಷಚಂದ್ರ ರಾಠೋಡ, ಶರಣು ದಿವಾಣಜಿ, ಶಮಶೋದ್ದಿನ್ ಅಖ್ತರ್, ಬಸವರಾಜ ಮಾಲಗತ್ತಿ, ಸುರೇಖಾ ಪದಕಿ, ವಿಜಯಕುಮಾರ ದೇಸಾಯಿ, ಬಸವರಾಜ ಸಪ್ಪನಗೋಳ, ನೂರ ಅಹ್ಮದ್ ಬಾಗವಾನ, ಪುಟ್ಟು ಹೂಗಾರ, ತನ್ವೀರ್ ಮಣ್ಣೂರ, ಸಿದ್ದು ರಾಣಿ, ಅನೀಲ್ ಸೊನ್ನ, ರಾಚಯ್ಯ ಮಠ, ಅನೀಲ ನಾವಿ ಹಾಗೂ ಸಚಿನ್ ಮ್ಯಾಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.