Afzalpur | ವಿದ್ಯಾರ್ಥಿಗಳು ಉನ್ನತ ಗುರಿಯೊಂದಿಗೆ ಮುನ್ನಡೆಯಬೇಕು: ಕೆ.ನಾರಾಯಣ
ಅಫಜಲಪುರ: ಜೀವನದಲ್ಲಿ ಯಶಸ್ಸು ಸಾಧಿಸಲು ಜ್ಞಾನಾರ್ಜನೆಯ ಹಂಬಲ, ಕಾರ್ಯನಿಷ್ಠೆ ಹಾಗೂ ಸರಿಯಾದ ಮಾರ್ಗದರ್ಶನ ಅತ್ಯಗತ್ಯ. ವಿದ್ಯಾರ್ಥಿಗಳು ತಮ್ಮಲ್ಲಿರುವ ಸಾಮರ್ಥ್ಯವನ್ನು ಗುರುತಿಸಿಕೊಂಡು ಉನ್ನತ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ವಿರೇಂದ್ರ ಪಾಟೀಲ ಪದವಿ ಕಾಲೇಜಿನ ಪ್ರಾಚಾರ್ಯ ಕೆ. ನಾರಾಯಣ ಹೇಳಿದರು.
ಪಟ್ಟಣದ ಆನೂರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ, ಬಿಕಾಂ ಹಾಗೂ ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ವಾಗತ ಸಮಾರಂಭ ಹಾಗೂ ವಿವಿಧ ಘಟಕಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿ ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳು ಮತ್ತು ವಿವೇಚನಾಶಕ್ತಿಯನ್ನು ಬೆಳೆಸಿಕೊಳ್ಳುವುದು ಮುಖ್ಯವಾಗಿದೆ. ಗುರುವಿನ ಮಾರ್ಗದರ್ಶನ ಪಡೆದು ಉತ್ತಮ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳು ಈಗಿನಿಂದಲೇ ಸಿದ್ಧರಾಗಬೇಕು ಎಂದು ಕಿವಿಮಾತು ಹೇಳಿದರು.
ಡಾ. ಸಂಗಣ್ಣ ಸಿಂಗೆ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಭವಿಷ್ಯದ ಬೆಳವಣಿಗೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಕಾಲೇಜಿನಲ್ಲಿ ದೊರೆಯುವ ಶೈಕ್ಷಣಿಕ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ಜ್ಞಾನ ಮತ್ತು ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು. ಸಮಾಜಕ್ಕೆ ಕೊಡುಗೆ ನೀಡುವ ಜವಾಬ್ದಾರಿಯುತ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಸಂತೋಷ ಹುಗ್ಗಿ ಮಾತನಾಡಿ, ಪದವಿ ಶಿಕ್ಷಣವು ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಭದ್ರ ಬುನಾದಿಯಾಗಿದೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಅಧ್ಯಯನದಲ್ಲಿ ಪ್ರಗತಿ ಸಾಧಿಸುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಐಕ್ಯೂಎಸಿ ಸಂಯೋಜಕ ಡಾ. ಸೂರ್ಯಕಾಂತ ಉಮಾಪುರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಮಲ್ಲಮ್ಮ ಪ್ರಾರ್ಥಿಸಿದರು. ಮೇಘಾ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಭೂಸಾರೆ ನಿರೂಪಿಸಿದರು. ಸಾಧಿಕ್ ಚೌದ್ರಿ ವಂದಿಸಿದರು.
ಈ ಸಂದರ್ಭದಲ್ಲಿ ಡಾ. ಶಾಂತಲಾ ಎ.ಸಿ., ಡಾ. ಮಹೇಶ ಎಸ್., ಡಾ. ಚಿನ್ನಾ ಆಶಪ್ಪ, ಡಾ. ಮಹ್ಮದ್ ಯೂನುಸ್, ಡಾ. ರಾಘವೇಂದ್ರ, ಪ್ರವೀಣ, ಡಾ. ಶಾಮರಾವ, ಡಾ. ಕ್ಷೇಮಲಿಂಗ ಭಾಸ್ಕರ್, ಮಲ್ಲಿಕಾರ್ಜುನ, ಡಾ. ಗಿರಿಜಾ, ಡಾ. ನಾಗವೇಣಿ, ಡಾ. ಕವಿತಾ, ಮುಸ್ತಾಫಾ, ಪೃಥ್ವಿರಾಜ್, ಅಂಬಿಕಾ, ಸಪನಾ, ಶ್ರೀಶೈಲ್, ಕಿರಣಕುಮಾರ, ಪ್ರದೀಪ, ಸುರೇಶ ಜಿ., ಸಂತೋಷ ಜಿ., ಪ್ರದೀಪ, ಆಶಾದೀಪಾ, ಸಂಜಯಕುಮಾರ ಪೂಜಾರಿ, ಡಾ. ಜ್ಯೋತಿ, ದೀಪಿಕಾ ಹಾಗೂ ಅಫ್ರೀನಾ ಬಾನು ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.