ಛಲವಾದಿ ನಾರಾಯಣಸ್ವಾಮಿ ಅವರಿಗೆ ಅವಮಾನ ಖಂಡಿಸಿ ಬಿಜೆಪಿಯಿಂದ 'ಕಲಬುರಗಿ ಚಲೋ' ಪ್ರತಿಭಟನೆ
ಕಲಬುರಗಿ : ಸತತ 3 ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡುತ್ತಿರುವ ಪ್ರಿಯಾಂಕ್ ಖರ್ಗೆ ಅವರನ್ನು ಮೆಚ್ಚಿದ್ದೆ, ಆದರೆ ಅವರು ಮತ್ತು ಅವರ ಪಕ್ಷ ಗುಲ್ಬರ್ಗಾ ಜಿಲ್ಲೆಯಲ್ಲಿ 40 ವರ್ಷಗಳ ಕಾಲ ಆಡಳಿತ ನಡೆಸಿ, ಇಂದೂ ಸಹ ಕಾಂಗ್ರೆಸ್ ಪಾಳೇಗಾರಿಕೆಯಂತೆ ವರ್ತನೆ ತೋರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಛಲವಾದಿ ನಾರಾಯಣಸ್ವಾಮಿ ಅವರಿಗೆ ಅಪಮಾನ ಖಂಡಿಸಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ 'ಕಲಬುರಗಿ ಚಲೋ' ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಛಲವಾದಿ ನಾರಾಯಣಸ್ವಾಮಿ ಅವರು ದಲಿತ ಕುಟುಂಬದಿಂದ ಬಂದಿದ್ದಾರೆ ಎಂಬ ಕಾರಣಕ್ಕೆ ಅವರ ವಿರುದ್ಧ ದಬ್ಬಾಳಿಕೆ ಮಾಡುತ್ತಿದ್ದೀರಾ? ಅಧಿಕಾರ ಶಾಶ್ವತವಲ್ಲ, ನಿಮ್ಮ ದರ್ಪ ಅಳಿಸುವ ಶಕ್ತಿ ನಮ್ಮ ಕಾರ್ಯಕರ್ತರಲ್ಲಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಮಗನಾಗಿ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಇಂತಹವುಗಳಿಗೆ ಬಿಜೆಪಿ ಹಿಂದೆ ತಕ್ಕ ಉತ್ತರ ಕೊಟ್ಟಿದೆ, ನಾವು ಮುಂದೆ ತಕ್ಕ ಉತ್ತರ ಕೊಡಲಿದ್ದೇವೆ ಎಂದರು.
ಎಸೆಸೆಲ್ಸಿ ಫಲಿತಾಂಶದಲ್ಲಿ ಕಲಬುರಗಿ ಕೊನೆಯ ಸ್ಥಾನ ಬಂದಿದೆ. ಇಲ್ಲಿ ಸುದೀರ್ಘ ಆಡಳಿತ ನಡೆಸಿರುವ ನೀವು ಫಲಿತಾಂಶದಲ್ಲಿ ಉತ್ತಮ ಏರಿಕೆ ಆಗಿದ್ದರೆ ಮೆಚ್ಚುತ್ತಿದ್ದೆ, ಫಲಿತಾಂಶದ ಹೆಚ್ಚಳಕ್ಕೆ ಏನು ಮಾಡಲಿಲ್ಲ. ನಿಮ್ಮ ಅಧಿಕಾರದ ಅವಧಿಯಲ್ಲಿ ಎಷ್ಟು ಸಾವಿರ ಕೋಟಿ ರೂ. ಅನುದಾನ ಜಿಲ್ಲೆಗೆ ತಂದಿದ್ದೀರಿ ಉತ್ತರ ಕೊಡಿ , ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಲಿಲ್ಲ, 15 ಸಾವಿರಕ್ಕೂ ಹೆಚ್ಚಿನ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಿಲ್ಲ ಯಾಕೆ? ಎಂದು ಪ್ರಶ್ನಿಸಿದರು.
ಚುನಾವಣೆ ನಡೆದರೆ 135 ಸೀಟ್ :
ಸರಕಾರ ಗ್ಯಾರಂಟಿ ಎನ್ನುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಬಡವರು ಕಣ್ಣೀರು ಹಾಕುತ್ತಿದ್ದಾರೆ, ಶಾಸಕರಿಗೆ ಅನುದಾನ ಸಿಗುತ್ತಿಲ್ಲ, ಇಂತಹ ರೈತರ, ದಲಿತರ ವಿರೋಧಿ ಸರಕಾರವನ್ನು ಬುಡ ಸಮೇತ ಕಿತ್ತು ಹಾಕುವ ಕೆಲಸ ಮಾಡಲಿದ್ದೇವೆ ಎಂದರು. ಒಂದು ವೇಳೆ ಈಗ ಚುನಾವಣೆ ನಡೆದರೆ, ಖಾಸಗಿ ವಾಹಿನಿಯ ಸಮೀಕ್ಷೆ ಆಧಾರದ ಮೇಲೆ 130 ರಿಂದ 135 ಸೀಟ್ ಗಳು ಬಿಜೆಪಿ ಗೆಲ್ಲಲಿದೆ ಎಂದು ತಿಳಿಸಿದರು.
ವಿಧಾನ ಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಈಗ ಛಲವಾದಿ ನಾರಾಯಣಸ್ವಾಮಿ ಅವರಿಗೆ ಅವಮಾನ ಆದರೂ ಅಥವಾ ನಮ್ಮ ಕಾರ್ಯಕರ್ತರಿಗೆ ಅವಮಾನವಾದರೂ ನಾವು ಸಹಿಸಲ್ಲ, ದಿನಾಲೂ ಸಂವಿಧಾನ ಪುಸ್ತಕ ತೆಗೆದುಕೊಂಡು ತೀರುಗಾಡ್ತೀರಿ ಯಾವ ಕಾಲಂನಲ್ಲಿ ಗೂಂಡಾಗಿರಿ ಉಲ್ಲೇಖಿಸಲಾಗಿದೆ ಒಮ್ಮೆ ತಿಳಿಸಿ ಎಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ್ದು, ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ನಿಮ್ಮ ಕಾರ್ಯಕರ್ತರ ಗುಂಡಾಗಿರಿಗೆ ನೀವೇ ರಾಜೀನಾಮೆ ಕೊಡಬೇಕು, ನಾನು ಕೊಡಲ್ಲ ಎಂದರು.
ಬಿ.ಶ್ರೀರಾಮುಲು, ಚಿತ್ರದುರ್ಗ ಸಂಸದ ಗೋವಿಂದ್ ಕಾರಜೋಳ, ಎಂಎಲ್ಸಿ ಸಿ.ಟಿ.ರವಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಮುನಿಸ್ವಾಮಿ, ಪ್ರೀತಂ ಗೌಡ, ಸುನೀಲ್ ವಲ್ಯಪುರೆ, ಸಿ.ಟಿ ರವಿ, ಎಂಎಲ್ಸಿ ಶಶೀಲ್ ನಮೋಶಿ, ಸಿಮೆಂಟ್ ಮಂಜುನಾಥ್, ರಾಜಕುಮಾರ್ ಪಾಟೀಲ್ ತೆಲ್ಕೂರ್, ಸಿದ್ದು ಸವದಿ, ಹರೀಶ್ ಪೂoಜಾ, ಅಮರನಾಥ್ ಪಾಟೀಲ್, ಎನ್.ರವಿಕುಮಾರ್, ಬಿ.ಶ್ರೀರಾಮುಲು, ದತ್ತಾತ್ರೇಯ ಪಾಟೀಲ್ ರೇವೂರ್, ಬಸವರಾಜ್ ದಡೆಸೂಗುರು, ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮಡು, ಚಿಂಚೋಳಿ ಶಾಸಕ ಅವಿನಾಶ್ ಜಾಧವ್, ಬಿ.ಜಿ ಪಾಟೀಲ್, ಚಂದು ಪಾಟೀಲ್, ಅವ್ವಣ್ಣಾ ಮ್ಯಾಕೇರಿ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಸಂತೋಷ್ ಹಾದಿಮನಿ, ಮಹಾಗಾoಕರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಸ್ವಾಗತಿಸಿದರು.