×
Ad

ಕಲ್ಯಾಣ ಕರ್ನಾಟಕಕ್ಕೆ ಬಂಪರ್ ಕೊಡುಗೆ : ಶಾಸಕ ಡಾ.ಅಜಯ್ ಸಿಂಗ್ ಸಂತಸ

Update: 2025-03-07 21:09 IST

ಕಲಬುರಗಿ : ಸಿಎಂ ಸಿದ್ದರಾಮಯ್ಯ ಮಂಡಿಸಿರುವ 16 ನೇ ಬಜೆಟ್ ಐತಿಹಾಸಿಕವಾಗಿದ್ದು, ಇದೇ ಮೊದಲ ಬಾರಿಗೆ 4 ಲಕ್ಷ ಕೋಟಿ ರೂ. ಗೂ ಅಧಿಕ ಮೊತ್ತದ ಬಜೆಟ್ ಗಾತ್ರವಿದೆ. ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ರೂ. ಘೋಷಣೆಯಾಗಿದ್ದು, ಇದು ಹಿಂದುಳಿದ ನೆಲದ ಸಮಗ್ರ ಪ್ರಗತಿಗೆ ವರವಾಗಲಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಧರ್ಮಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.

ದೇಶದ ಜಿಡಿಪಿಗೆ ರಾಜ್ಯದ ಕೊಡುಗೆ ಶೇ.8.4 ಇದೆ. ದೇಶದ ಸಮಗ್ರ ಪ್ರಗತಿಗೆ ನಮ್ಮ ರಾಜ್ಯದ ಕೊಡುಗೆ ಗಣನೀಯವಾಗಿ ಹೆಚ್ಚಿದೆ, ರಾಜ್ಯದ ಆರ್ಥಿಕ ಬೆಳವಣಿಗೆ 7.4 ರಷ್ಟಾಗಿದ್ದು ಗಣನೀಯವಾಗಿ ಹೆಚ್ಚಳವಾಗಿದೆ. ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆ ಶೇ. 6.4 ರಷ್ಟಿದೆ, ನಮ್ಮ ರಾಜ್ಯದ್ದೂ ರಾಷ್ಟ್ರೀಯ ಸರಾಸರಿಗಿಂತ ಅಧಿಕವಾಗಿದೆ. ಇದಕ್ಕೆ ನಮ್ಮಲ್ಲಿರುವ ಆರ್ಥಿಕ ಶಿಸ್ತು ಕಾರಣವಂದು ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಮತ್ತೆ 51 ಸಾವಿರ ಕೋಟಿ ರೂ. ಗೂ ಹೆಚ್ಚಿನ ಹಣ ಮೀಸಲಿಡಲಾಗಿದೆ. ಗ್ಯಾರಂಟಿಯ ಜೊತೆಗೇ ಪ್ರಗತಿಗೂ ಬದ್ಧ ಎಂಬುದಕ್ಕೆ ಇಲ್ಲಿನ ಬೆಳವಣಿಗೆಗಳೇ ಕನ್ನಡಿ. ಕೆಕೆಆರ್‌ಡಿಬಿಗೆ ಕಳೆದ 3 ವರ್ಷಗಳಿಂದ 13 ಸಾವಿರ ಕೋಟಿ ರೂ. ಹಣ ಬಂದಿದ್ದು, ಈ ಬಾರಿ ಮತ್ತೆ 5 ಸಾವಿರ ಕೋಟಿ ರೂ. ಘೋಷಣೆಯಾಗಿರೋದು ಇಲ್ಲಿನ ಪ್ರಗತಿಗೆ ವರವಾಗಲಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಬಜೆಟ್‌ನಲ್ಲಿ ಕೆಕೆಆರ್‌ಡಿಬಿ ಸಹಯೋಗದಲ್ಲಿ ಕಲ್ಯಾಣ ಭಾಗಕ್ಕೆ ಸಿಕ್ಕಿರುವ ಕೊಡುಗೆಗಳು :

ಕೆಕೆಆರ್‌ಡಿಬಿಯ 25 ಕೋಟಿ ರೂ. ಅನುದಾನದಲ್ಲಿ ಕೊಪ್ಪಳ ಜಿಲ್ಲೆಯ ಬೂದುಗುಂಪ ಗ್ರಾಮದಲ್ಲಿ ಕುರಿ ಮತ್ತು ಮೇಕೆ ಮಾರುಕಟ್ಟೆಯನ್ನು ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಸ್ಥಾಪಿಸಲಾಗುವುದು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು 10 ಕೋಟಿ ರೂ. ಅನುದಾನವನ್ನು ಪ್ರಥಮ ಹಂತದಲ್ಲಿ ನೀಡಲಾಗುವುದು. ಕಲಬುರಗಿಯಲ್ಲಿ ನೂತನ ಮೆಗಾ ಡೈರಿಯನ್ನು ಪ್ರಾರಂಭಿಸಲು ಕೆಕೆಆರ್‌ಡಿಬಿ ವತಿಯಿಂದ 50 ಕೋಟಿ ರೂ. ಅನುದಾನ ಒದಗಿಸಲಾಗುವುದು.

ಕೆಕೆಆರ್‌ಡಿಬಿ ವತಿಯಿಂದ ಕಲಬುರಗಿಯಲ್ಲಿ ಪ್ರಾದೇಶಿಕ ಸಹಕಾರ ಭವನವನ್ನು 10 ಕೋಟಿ ರೂ. ವೆಚ್ಚ, ಗ್ರಾಮೀಣ ಉಗ್ರಾಣಗಳನ್ನು 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆ ಅಡಿ 200 ಕೋಟಿ ರೂ. ವೆಚ್ಚದಲ್ಲಿ ಆಯ್ದ 50 ಶಾಲೆಗಳನ್ನು ಸುಸಜ್ಜಿತ ಕೆ.ಪಿ.ಎಸ್. ಶಾಲೆಗಳನ್ನಾಗಿ ಉನ್ನತೀಕರಿಸುವ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಮುಂದುವರೆದು, ಇಲಾಖೆಯಲ್ಲಿ ಇನ್ನೂ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತರ್ಕಬದ್ಧಗೊಳಿಸಿ 5,000 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸುವ ಬಗ್ಗೆ ಬಜೆಟ್ ನಲ್ಲಿ ಘೋಷಣೆಯಾಗಿದೆ. ಕೆಕೆಆರ್‌ಡಿಬಿ ವತಿಯಿಂದ 23,000 ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಾ.ಅಜಯ್ ಸಿಂಗ್ ಹೇಳಿದ್ದಾರೆ.

ಕೆಕೆಆರ್‌ಡಿಬಿ ನೆರವಲ್ಲಿ ಕಲಬುರಗಿಯಲ್ಲಿ ಪ್ರಾದೇಶಿಕ ಸಹಕಾರ ಭವನ- 10 ಕೋಟಿ ರೂ., ಗ್ರಾಮೀಣ ಉಗ್ರಾಣ ನಿರ್ಮಾಣ 60 ಕೋಟಿ ರೂ., ಅಕ್ಷರ ಅವಿಷ್ಕಾರ ಯೋಜನೆಯಡಿ 200 ಕೋಟಿ ರೂ. ವೆಚ್ಚದಲ್ಲಿ 50 ಶಾಲೆಗಳನ್ನು ಸುಸಜ್ಜಿತ ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸೋದು, ಕಲ್ಯಾಣ ಭಾಗದಲ್ಲಿ ಖಾಲಿ ಇರುವ 5, 267 ಶಿಕ್ಷಕರ ಹುದ್ದೆಗಳನ್ನು ಭರ್ತಿಗೆ ಕ್ರಮ, ಖಾಲಿ ಇರುವ ಶಿಕ್ಷಕ ಹುದ್ದೆಗಳನ್ನು ತರ್ಕಬದ್ದಗೊಳಿಸಿ 5,000 ಹುದ್ದೆಗಳನ್ನು ಭರ್ತಿಮಾಡಲು ಕ್ರಮ, ಕೆಕೆಆರ್ಡಿಬಿಯಿಂದ 23 ಸಾವಿರ ಮಕ್ಕಳಿಗೆ ಕೌಶಲ್ಯ ಅಭಿವೃದ್ಧಿ 10 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದಿದ್ದಾರೆ.

ಕೆಕೆಆರ್‌ಡಿಬಿಯ 25 ಕೋಟಿ ರೂ. ಅನುದಾನದಲ್ಲಿ ಸೇಡಂ ಐಟಿಐಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೇಲ್ದರ್ಜೆಗೆ ಉನ್ನತೀಕರಣ :

ಕೊಪ್ಪಳದಲ್ಲಿರುವ ತಳಕಲ್ ನಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಜಿಟಿಟಿಸಿ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ, ಕಂಪ್ಲಿ ಹಾಗೂ ರಾಯಚೂರು, ಸಿಂಧನೂರಲ್ಲಿ ಜಿಟಿಟಿಸಿ ಕೇಂದ್ರ, ಕಲ್ಯಾಣ ಪಥ ಸಾವಿರ ಕಿಮೀ ರಸ್ತೆ ಅಭಿವೃದ್ಧಿಗೆ ಕೆಕೆಆರ್‌ಡಿಬಿ 1,000 ಕೋಟಿ ರೂ. ಅನುದಾನ, 38 ಅಸೆಂಬ್ಲಿ, 286 ರಸ್ತೆ ಕಾಮಗಾರಿಗೆ ಚಾಲನೆ ನೀಡಲಿದೆ ಎಂದು ಹೇಳಿದ್ದಾರೆ.

ಆರೋಗ್ಯ ಅವಿಷ್ಕಾರಕ್ಕೆ 873 ಕೋಟಿ ರೂ. :

ಕಲ್ಯಾಣ ಕರ್ನಾಟಕ 7 ಜಿಲ್ಲೆಗಳಲ್ಲಿ ಆರೋಗ್ಯ ಅವಿಷ್ಕಾರದಡಿಯಲ್ಲಿ 873 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಆರೋಗ್ಯ ಅಭಿವೃದ್ದಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಕಲ್ಯಾಣ ಕರ್ನಾಟಕ ಸಂಪೂರ್ಣ ಆರೋಗ್ಯ ಅಭಿವೃದ್ಧಿ ಯೋಜನೆಯಡಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಕೈಗೆತ್ತಿಕೊಳ್ಳಲಿರುವ ವಿವಿಧ ಕಾರ್ಯಯೋಜನೆಗಳು :

1. ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು-24

2. ಹೊಸ ನಗರ ಆರೋಗ್ಯ ಕೇಂದ್ರಗಳು-07

3. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೇಲ್ದರ್ಜೆಗೇರಿಸುವುದು-10

4. ಹೊಸ ನಗರ ಸಮುದಾಯ ಆರೋಗ್ಯ ಕೇಂದ್ರಗಳು-04

5. 30 ಹಾಸಿಗೆಗಳ ಸಮುದಾಯ ಕೇಂದ್ರಗಳನ್ನು 50 ಹಾಸಿಗೆಗಳ ಈಖU ಗಳಿಗೆ ಮೇಲ್ದರ್ಜೆಗೇರಿಸುವುದು-25

ಕಮಲಾಪುರ, ಕಂಪ್ಲಿ, ಕುರಗೋಡು, ಶಹಬಾದ್, ಕುಕನೂರು, ಕಾರಟಗಿ, ಕನಕಗಿರಿಯಲ್ಲಿ 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗುವುದು.

ಸಿರಗುಪ್ಪ, ಸಂಡೂರು, ಭಾಲ್ಕಿ, ಸೇಡಂ, ಚಿತ್ತಾಪುರ, ಜೇವರ್ಗಿ, ಗಂಗಾವತಿ, ಕೂಡ್ಲಗಿ, ಶಹಾಪುರದಲ್ಲಿ 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆಗಳನ್ನು 150 ಹಾಸಿಗೆಗಳ ವಿಭಾಗೀಯ ಆಸ್ಪತ್ರೆಗಳಾಗಿ ಮೇಲ್ದರ್ಜೇಗೇರಿಸುವುದು. ಬಸವಕಲ್ಯಾಣ ಮತ್ತು ಲಿಂಗಸುಗೂರು ವಿಭಾಗೀಯ ಆಸ್ಪತ್ರೆಗಳನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಡಾ.ಅಜಯ್ ಸಿಂಗ್ ಹೇಳಿದ್ದಾರೆ.

ಕಲಬುರಗಿಯಲ್ಲಿ 92 ಕೋಟಿ ರೂ. ವೆಚ್ಚದ ತಾಯಿ- ಮಕ್ಕಳ ಆಸ್ಪತ್ರೆ, 304 ಕೋಟಿ ರು ವೆಚ್ಚದ ಜಯದೇವ ಆಸ್ಪತ್ರೆ ಸ್ಥಾಪನೆ, ಕಲಬುರಗಿ ಜಿಮ್ಸ್ ನ ವ್ಯಾಪ್ತಿಯಲ್ಲಿ 100 ಕೋಟಿ ರೂ. ವೆಚ್ಚದ ಎಂಡೋಕ್ರೆನಾಲಜಿ ಕೇಂದ್ರ ಸ್ಥಾಪನೆ.

ಕಲಬುರಗಿ ಜಿಮ್ಸ್ ವ್ಯಾಪ್ತಿಯಲ್ಲಿ ನಿಮ್ಹಾನ್ ಮಾದರಿ ಸಂಸ್ಥೆ, 100 ಕೋಟಿ ರು, ಜೇವರ್ಗಿ, ಯಲಬುರ್ಗ, ಯಾದಗಿರಿಯಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನರ್ಸಿಂಗ್ ಕಾಲೇಜು ಸ್ಥಾಪನೆಗೂ ಕೆಕೆಆರ್‌ಡಿಬಿ ಅನುದಾನವೇ ಬಳಕೆಯಾಗಲಿದೆ.

ರಾಜ್ಯದ ಪ್ರಗತಿ ಹಾಗೂ ಪ್ರಾದೇಶಿಕ ಅಸಮಾನತೆ ಅಸಮತೋಲನ ಅಧ್ಯಯನಕ್ಕೆ ಪ್ರೊ. ಗೋವಿಂದರಾವ ಅಧ್ಯಕ್ಷತೆಯ ಕರ್ನಾಟಕ ಪ್ರಾದೇಶಿಕ ಅಸಮತೋಲನನಿವಾರಣಾ ಸಮೀತಿ ರಚನೆ. ಸದರಿ ಸಮೀತಿ ವರದಿ ಆಧರಿಸಿ ಪ್ರಾದೇಶಿಕ ಅಸಮತೋಲನನಿವಾರಣೆಗೆ ಕ್ರಮ ಕೈಗೊಳ್ಳೋದಾಗಿ ಸಿಎಂ ಸಿದ್ದರಾಮಯ್ಯನವರು ತಮ್ಮ ಬಜೆಟ್ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಕಲ್ಯಾಣ ನಾಡಿನ ಪ್ರಗತಿಗೆ ಬದ್ಧವಾಗಿದೆ ಎಂಬುದರಲ್ಲಿ ದೂಸ್ರಾ ಮಾತಿಲ್ಲ ಎಂದೂ ಕೆಕೆಆರ್ಡಿಬಿ ಅಧ್ಯಕ್ಷರಾದ ಡಾ.ಅಜಯ್ ಧರ್ಮಸಿಂಗ್ ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News