ಚಿಂಚೋಳಿ| ಸಿದ್ಧಸಿರಿ ಎಥೆನಾಲ್ ಕಾರ್ಖಾನೆ ಆರಂಭಕ್ಕೆ ಆಗ್ರಹಿಸಿ ಸುಲೇಪೇಟೆ ಬಂದ್ ಯಶಸ್ವಿ
ಚಿಂಚೋಳಿ: ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕಿನ ರೈತರು ಸಿದ್ಧಸಿರಿ ಎಥೆನಾಲ್ ಕಾರ್ಖಾನೆಯನ್ನು ತಕ್ಷಣವೇ ಪುನರಾರಂಭಿಸಬೇಕು ಹಾಗೂ ಕಬ್ಬಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಬುಧವಾರ ಕರೆ ನೀಡಲಾಗಿದ್ದ 'ಸುಲೇಪೇಟೆ ಬಂದ್' ಯಶಸ್ವಿಯಾಯಿತು.
ಸುಲೇಪೇಟೆಯ ಮುಖ್ಯ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ರೈತರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆಯಿಂದಲೇ ವಿವಿಧ ಹಳ್ಳಿಗಳಿಂದ ಆಗಮಿಸಿದ ರೈತರು ಸುಲೇಪೇಟೆ ಸರ್ಕಲ್ನಲ್ಲಿ ಧರಣಿ ನಡೆಸಿದರು.
ಧರಣಿ ಉದ್ದೇಶಿಸಿ ಮಾತನಾಡಿದ ರೈತ ನಾಯಕ ಮಲ್ಲಿಕಾರ್ಜುನ ದೇಸಾಯಿ, ಸಿದ್ಧಸಿರಿ ಎಥೆನಾಲ್ ಕಾರ್ಖಾನೆಗೆ ತಕ್ಷಣವೇ ಕಬ್ಬು ಖರೀದಿ ಮತ್ತು ನುರಿಸಲು ಅಧಿಕೃತ ಅನುಮತಿ ನೀಡಬೇಕು. ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500ರೂ. ಬೆಂಬಲ ಬೆಲೆ ಹಾಗೂ ಸೂಕ್ತ FRP ದರ ನಿಗದಿಪಡಿಸಬೇಕು. ಬರಗಾಲದಿಂದ ನಷ್ಟ ಅನುಭವಿಸಿದ ರೈತರಿಗೆ ತಕ್ಷಣ ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ನಾಯಕ ವೀರಣ್ಣ ಗಂಗಾಣಿ, ಸರಕಾರಗಳು ತಕ್ಷಣವೇ ಎಚ್ಚೆತ್ತುಕೊಂಡು ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡದಿದ್ದರೆ ಮುಂಬರುವ ದಿನಗಳಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆದು ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ನಿಡಗುಂದಾದ ಕಂಚಾಳಕುಂಟಿ ಕರುಣೇಶ್ವರ ಸ್ವಾಮೀಜಿ, ಚಿಮ್ಮಾ ಇದಲಾಯಿಯ ಮಹಾಂತೇಶ್ವರ ಸ್ವಾಮೀಜಿ, ಸುಲೇಪೇಟ ಖಟ್ವಾಂಗೇಶ್ವರ ಮಠದ ಪ್ರಭುದೇವರು, ಮಾರುತಿ ಗಂಜಗೇರಿ, ವೀರಣ್ಣ ಗಂಗಾಣಿ, ಮಲ್ಲಿಕಾರ್ಜುನ ದೇಸಾಯಿ, ಮಲ್ಲು ರಾಯಪಗೊಳ, ರವಿ ರಾಠೋಡ, ಮಶಾಕ ಸಾಬ್, ಶಿವರಾಮ ರಾಠೋಡ, ಪ್ರಕಾಶ ಸಜ್ಜನ, ಜಗನ್ನಾಥ ದಸ್ತಾಪುರ, ಜಾಕೀರ ಪಟೇಲ್, ಶರಣು ಸ್ವಂತ, ಮಲ್ಲಿಕಾರ್ಜುನ ಮಾಳಗಿ, ರಜಾಕ್ ಪಟೇಲ್, ಸಿರಾಜ್ ಪಟೇಲ್, ಅಂಬ್ರೇಶ್ ಗಣಾಪುರ, ನಾರಾಯಣ ರೆಡ್ಡಿ, ರೇವಣಸಿದ್ದಪ್ಪ ಅಣಕಲ್ ಸೇರಿದಂತೆ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ರೈತರು ಪಾಲ್ಗೊಂಡಿದ್ದರು.