Chitapur | ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ನಾಲ್ಕು ದೇಶಗಳ ವಿದೇಶಿ ಕರೆನ್ಸಿ ಪತ್ತೆ
ಚಿತ್ತಾಪುರ: ಪಟ್ಟಣದ ರಾಷ್ಟ್ರಕೂಟರ ಕುಲದೇವತೆ ಎಂದೇ ಖ್ಯಾತಿ ಪಡೆದ ನಾಗಾವಿ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿಯನ್ನು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರ ನೇತೃತ್ವದಲ್ಲಿ ತೆರೆಯುವ ವೇಳೆ ನಾಲ್ಕು ದೇಶಗಳ ವಿದೇಶಿ ಕರೆನ್ಸಿ ಪತ್ತೆಯಾಗಿ ಅಚ್ಚರಿ ಮೂಡಿಸಿದೆ.
ಹುಂಡಿಯಲ್ಲಿನ ಹಣ ಎಣಿಕೆ ವೇಳೆ ಕೊರಿಯಾ, ಕೆನಡಾ, ಯುಎಇ ಹಾಗೂ ಅಮೆರಿಕ ದೇಶಗಳ ವಿವಿಧ ಮೌಲ್ಯದ ನೋಟುಗಳು ಮತ್ತು ನಾಣ್ಯಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 17,010 ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಿ ಕರೆನ್ಸಿಯನ್ನು ಭಾರತೀಯ ರೂಪಾಯಿಗೆ ವಿನಿಮಯ ಮಾಡಿಕೊಂಡು ದೇವಸ್ಥಾನದ ಖಾತೆಗೆ ಜಮೆ ಮಾಡಲಾಗುವುದು ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಮಾಹಿತಿ ನೀಡಿದರು.
ಈ ಬಾರಿ ಹುಂಡಿಯಲ್ಲಿ ಒಟ್ಟು 16.32 ಲಕ್ಷ ರೂ. ನಗದು ಸಂಗ್ರಹವಾಗಿದೆ. ಕಳೆದ ಫೆಬ್ರವರಿ 21ರಂದು ನಡೆದ ಹುಂಡಿ ಎಣಿಕೆಯಲ್ಲಿ 14.73 ಲಕ್ಷ ರೂ. ಜೊತೆಗೆ ಮಲೇಷ್ಯಾದ 18 ನೋಟುಗಳು ಹಾಗೂ ಎರಡು ನಾಣ್ಯಗಳು ಪತ್ತೆಯಾಗಿದ್ದವು.
ಈ ಬಾರಿ ನಾಲ್ಕು ದೇಶಗಳ ಕರೆನ್ಸಿ ಪತ್ತೆಯಾಗಿರುವುದು ಭಕ್ತರಲ್ಲಿ ಕುತೂಹಲ ಮೂಡಿಸಿದೆ. ಯಲ್ಲಮ್ಮ ದೇವಿಯ ಭಕ್ತರು ವಿದೇಶದಲ್ಲಿಯೂ ಇದ್ದಾರೆಯೇ ಅಥವಾ ವಿದೇಶ ಪ್ರವಾಸದಿಂದ ಹಿಂದಿರುಗಿದ ಭಕ್ತರು ಅಲ್ಲಿನ ಕರೆನ್ಸಿಯನ್ನು ಕಾಣಿಕೆಯಾಗಿ ಹುಂಡಿಗೆ ಹಾಕಿದ್ದಾರೆಯೇ ಎಂಬ ಚರ್ಚೆ ಭಕ್ತರ ವಲಯದಲ್ಲಿ ನಡೆಯುತ್ತಿದೆ.
ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ಹುಂಡಿ ತೆರೆಯುವ ಹಾಗೂ ಹಣ ಎಣಿಕೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.