×
Ad

ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರೇ ಕೆಟ್ಟು ನಿಂತ ನಗರ ಬಸ್ : ಪ್ರಯಾಣಿಕರಲ್ಲಿ ಆತಂಕ

Update: 2026-05-08 21:20 IST

ಕಲಬುರಗಿ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ಕೆಕೆಆರ್‌ಟಿಸಿ ನಗರ ಬಸ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ನಗರದ 4ನೇ ಘಟಕಕ್ಕೆ ಸೇರಿದ ಕೆಎ-32 ಎಫ್-2047 ಸಂಖ್ಯೆಯ ಸಿಟಿ ಬಸ್ ಸಿಟಿ ಮಾರ್ಕೆಟ್‌ನಿಂದ ಕೇಂದ್ರ ಬಸ್ ನಿಲ್ದಾಣದ ಕಡೆಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಬಸ್‌ನ ಇಂಜಿನ್ ಅತಿಯಾಗಿ ಬಿಸಿಯಾಗಿದ್ದರಿಂದ ಇಂಜಿನ್ ಭಾಗದಿಂದ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ತಕ್ಷಣ ಬಸ್ ಅನ್ನು ರಸ್ತೆ ಬದಿಗೆ ನಿಲ್ಲಿಸಿ ಮುನ್ನೆಚ್ಚರಿಕೆ ವಹಿಸಿದ್ದಾರೆ.

ಘಟನೆಯ ಬಳಿಕ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ, ನಂತರ ಬೇರೆ ಬಸ್ ಮೂಲಕ ಗಮ್ಯಸ್ಥಾನಕ್ಕೆ ಕಳುಹಿಸಲಾಯಿತು. ತೀವ್ರ ಬಿಸಿಲು ಹಾಗೂ ಸಮರ್ಪಕ ನಿರ್ವಹಣೆ ಕೊರತೆಯಿಂದಲೇ ಬಸ್ ಕೆಟ್ಟು ನಿಂತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನಡು ರಸ್ತೆಯಲ್ಲೇ ಬಸ್ ನಿಂತಿದ್ದರಿಂದ ಕೆಲಕಾಲ ವಾಹನ ಸಂಚಾರ ದಟ್ಟಣೆ ಉಂಟಾಯಿತು. ಬಳಿಕ ಸಂಬಂಧಿತ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ಕೈಗೊಂಡರು.

ನಗರದಲ್ಲಿ ಸಂಚರಿಸುವ ಹಳೆಯ ಬಸ್‌ಗಳಿಗೆ ನಿಯಮಿತ ಸರ್ವಿಸ್ ಹಾಗೂ ಸಮರ್ಪಕ ನಿರ್ವಹಣೆ ಅಗತ್ಯವಿದೆ ಎಂದು ಪ್ರಯಾಣಿಕರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News