×
Ad

ಕಲಬುರಗಿ | ಬಿ.ಸಿ.ಜಿ ಲಸಿಕೆ ಹಾಕಿಸಿಕೊಳ್ಳುವಂತೆ ವಯಸ್ಕರಿಗೆ ಡಿ.ಸಿ. ಫೌಝಿಯಾ ತರನ್ನುಮ್ ಮನವಿ

Update: 2025-05-22 23:17 IST

ಕಲಬುರಗಿ: ಕ್ಷಯರೋಗ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ 18  ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ವಯಸ್ಕರ ಬಿ.ಸಿ.ಜಿ ಲಸಿಕೆ ನೀಡಲಾಗುತ್ತಿದೆ. ಇದು ಸುರಕ್ಷಿತವಾಗಿದ್ದು, ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಅನಗತ್ಯ ಭಯಪಡದೆ ಲಸಿಕೆ ಹಾಕಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದರು.

ಜಿಲ್ಲೆಯಾದ್ಯಂತ ಮನೆ ಮನೆ ಸಮೀಕ್ಷೆ ಮಾಡಿ ಅಪಾಯದಂಚಿನಲ್ಲಿರುವ 4,11,460 ಜನರನ್ನು ಈಗಾಗಲೆ ಗುರುತಿಸಲಾಗಿದೆ. ಇದರಲ್ಲಿ 55,056 ಜನ ಲಸಿಕೆ ಪಡೆಯಲು ಮೌಖಿಕ ಒಪ್ಪಿಗೆ ಸೂಚಿಸಿದ್ದು, ಈ ಪೈಕಿ ಇದುವರೆಗೆ 19,970 ವಯಸ್ಕರಿಗೆ ಬಿ.ಸಿ.ಜಿ ಲಸಿಕೆ ನೀಡಲಾಗಿದೆ. ಇನ್ನು ಒಪ್ಪಿಗೆ ಸೂಚಿಸದವರು ಹಿಂದೇಟು ಹಾಕದೆ ಕೂಡಲೆ ಒಪ್ಪಿಗೆ ಸೂಚಿಸಿ ಲಸಿಕೆ ಹಾಕಿಸಿಕೊಳ್ಳುಬೇಕೆಂದು ಅವರು ಆಗ್ರಹಿಸಿದರು. 

ದೇಶದ 23 ರಾಜ್ಯಗಳ 274 ಜಿಲ್ಲೆಗಳಲ್ಲಿ ಕೇಂದ್ರ ಸರಕಾರ ಪ್ರಾಯೋಗಿಕವಾಗಿ ಒಂದು ಲಸಿಕಾ ಅಭಿಯಾನ  ಹಮ್ಮಿಕೊಂಡಿದೆ. ಇದರಲ್ಲಿ ಕಲಬುರಗಿ ಸೇರಿ ರಾಜ್ಯದ 16 ಜಿಲ್ಲೆಗಳಲ್ಲಿ ಅಭಿಯಾನ ನಡೆಯುತ್ತಿದೆ. ಜಿಲ್ಲೆಯಲ್ಲಿ ಕಾರ್ಯಕ್ರಮ ಯಶಸ್ವಿಗೆ ವಯಸ್ಕರು ಸಹಕರಿಸಬೇಕೆಂದು ಅವರು ಕೋರಿದರು.

ಕ್ಷಯರೋಗದಿಂದ ಬಳಲುತ್ತಿರುವವರು ಚಿಕಿತ್ಸೆ ಮುಗಿದ 4 ವಾರಗಳ ನಂತರ ವಯಸ್ಕರ ಬಿಸಿಜಿ ಲಸಿಕೆಯನ್ನು ಪಡೆಯಬಹುದಾಗಿದೆ. ಅನಾರೋಗ್ಯದಿಂದ ಬಳಲಿ ಗುಣಮುಖರಾದವರಿಗೆ ವೈದ್ಯಕೀಯ ಸಲಹೆ ಮೇರೆಗೆ ಹಾಗೂ ರಕ್ತ ವರ್ಗಾವಣೆ ಮಾಡಿಕೊಂಡು 3 ತಿಂಗಳ ಅವಧಿ ಪೂರೈಸಿದವರಿಗೆ ವಯಸ್ಕರ ಬಿಸಿಜಿ ಲಸಿಕೆ ನೀಡಲು ವಿಶೇಷವಾಗಿ ಪರಿಗಣಿಸಲಾಗುತ್ತಿದೆ.

ಇವರಿಗೆ ಲಸಿಕೆ ಇಲ್ಲ:

18 ವರ್ಷಕ್ಕಿಂತ ಕೆಳ ವಯಸ್ಸಿನವರಿಗೆ, ಒಪ್ಪಿಗೆ ನೀಡದವರಿಗೆ, ಹೆಚ್.ಐ.ವಿ ರೋಗದಿಂದ ಬಳಲುತ್ತಿರುವವರಿಗೆ, ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ, ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಹಾಗೂ ಅಂಗಾಂಗಗಳನ್ನು ಕಸಿ ಮಾಡಿಕೊಂಡಿರುವವರಿಗೆ, ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರಿಗೆ, ಕಳೆದ 3 ತಿಂಗಳುಗಳಲ್ಲಿ ರಕ್ತ ವರ್ಗಾವಣೆ ಇತಿಹಾಸ ಹೊಂದಿರುವವರಿಗೆ, ಹೆಚ್.ಐ.ವಿ ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯಕ್ಕೆ ಕಾರಣವಾಗುವ ಇತಿಹಾಸ ಹೊಂದಿರುವವರಿಗೆ ಹಾಗೂ ಯಾವುದೇ ಕಾರಣದಿಂದ ಪ್ರಸುತ್ತ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಬಿ.ಸಿ.ಜಿ ಲಸಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News