ಕಲಬುರಗಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವಂತೆ ಆಗ್ರಹ
ಕಲಬುರಗಿ: ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಪ್ರದೇಶ ಹಾಗೂ ಜಿಲ್ಲೆಯ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಕಲಬುರಗಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ಹಾಗೂ ಎಲ್ಲ ರೀತಿಯ ಕ್ರೀಡೆಗಳಿಗೆ ಅಗತ್ಯವಿರುವ ಸೌಲಭ್ಯಗಳೊಂದಿಗೆ ಕ್ರೀಡಾ ಗ್ರಾಮ ಅಥವಾ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ, ಕಲ್ಯಾಣ ನಾಡು ವಿಕಾಸ ವೇದಿಕೆ ವತಿಯಿಂದ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯ ಧರ್ಮಸಿಂಗ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕಲಬುರಗಿ ಜಿಲ್ಲೆಯಲ್ಲಿ ಮೂಲಭೂತ ಕ್ರೀಡಾ ಸೌಕರ್ಯಗಳ ಕೊರತೆಯಿದ್ದು, ಜಿಲ್ಲೆಯಲ್ಲಿ ಕೂಡಲೇ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಲಬುರಗಿಗೆ ಕ್ರೀಡಾ ಅಭಿವೃದ್ಧಿಗೆ ಅನ್ಯಾಯವಾಗುತ್ತಿದೆ. ರಾಜ್ಯದ ಇತರೆ ನಗರಗಳಲ್ಲಿ ಕ್ರೀಡಾಂಗಣ ನಿರ್ಮಾಣವಾಗಿದ್ದರೂ, ಕಲಬುರಗಿಗೆ ಮಾತ್ರ ಮಲತಾಯಿ ಧೋರಣೆ ತೋರಲಾಗಿದೆ. ಇದು ಪ್ರಾದೇಶಿಕ ಅಸಮತೋಲನಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಕೂಡಲೇ ಸರ್ಕಾರ ಇತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ 50 ಎಕರೆ ಜಮೀನು ನೀಡಲು ಒಪ್ಪಿಗೆಯಿದ್ದು, ಅದೇ ಜಾಗ ಅಥವಾ ಬೇರೆ ಸ್ಥಳದಲ್ಲಿ 100 ಎಕರೆ ಪ್ರದೇಶವನ್ನು ಮೀಸಲಿಡಬೇಕು, ಕೆಕೆಆರ್‌ಡಿಬಿಯಿಂದ ಅನುದಾನ ನೀಡಲು ಸಿದ್ಧತೆ ಇರುವುದರಿಂದ ಯೋಜನೆಗೆ ತಕ್ಷಣ ಚಾಲನೆ ನೀಡಬೇಕು, ಕ್ರೀಡಾಂಗಣ ನಿರ್ಮಾಣದ ಜವಾಬ್ದಾರಿಯನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೀಡಬೇಕು, ಹಾಗೂ ರಣಜಿ ಪಂದ್ಯಗಳ ಆಯೋಜನೆ ಸಾಧ್ಯವಾಗುವಂತೆ ಮೈದಾನ ನಿರ್ಮಿಸಬೇಕು. ಅಲ್ಲದೆ, ಇತರೆ ಕ್ರೀಡೆಗಳಿಗೆ ಬೇಕಾದ ವಿಶ್ವಮಟ್ಟದ ಸೌಲಭ್ಯಗಳನ್ನು ಒಳಗೊಂಡ ಕ್ರೀಡಾ ಸಂಕೀರ್ಣ ನಿರ್ಮಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ, ಮುಖಂಡರಾದ ಜೈಭೀಮ ಮಾಳಗೆ, ಮೋಹನ ಸಾಗರ, ಮಲ್ಲು ಸಂಕನ, ದೇವು ದೊರೆ, ದತ್ತು ಜಮಾದಾರ, ರೋಹನ ನಿಂಬಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.