×
Ad

ಕಲಬುರಗಿ: ಜೇವರ್ಗಿ ಆಸ್ಪತ್ರೆಯ ಒಪಿಡಿ ಪುಸ್ತಕದಲ್ಲಿ ಸಿನೆಮಾದ ಭಕ್ತಿಗೀತೆ!

Update: 2025-07-16 19:56 IST

ಕಲಬುರಗಿ: ಆಸ್ಪತ್ರೆಯ ಹೊರ ರೋಗಿಗಳ (ಒಪಿಡಿ) ದಾಖಲಾತಿ ಪುಸ್ತಕದಲ್ಲಿ ಆಸ್ಪತ್ರೆಯ ಸಿಬ್ಬಂದಿ ಸಿನೆಮಾದ ಭಕ್ತಿಗೀತೆ ಬರೆದಿರುವ ಬಗ್ಗೆ ಪ್ರತ್ಯಕ್ಷವಾಗಿರುವ ಘಟನೆ ಜೇವರ್ಗಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಜೇವರ್ಗಿ ತಾಲ್ಲೂಕಿನ ಮಾರಡಗಿ ಎಸ್.ಎ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಆಸ್ಪತ್ರೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಲು ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು, ಡಿವೈಎಸ್‌ಪಿ ಗೀತಾ ಬೇನಾಳ ಅವರು ಭೇಟಿ ಕೊಟ್ಟಿದ್ದರು. ಇದೇ ವೇಳೆ ಆಸ್ಪತ್ರೆಯ ವ್ಯವಸ್ಥೆಯ ಕುರಿತು ಸಂಪೂರ್ಣವಾಗಿ ಪರಿಶೀಲಿಸುವ ವೇಳೆಯಲ್ಲೇ ದಾಖಲಾತಿ ಪುಸ್ತಕದಲ್ಲಿ ಭಕ್ತಿಗೀತೆ ಬರೆದಿರುವುದು ಕಂಡುಬಂದಿದೆ.

ಒಪಿಡಿ ದಾಖಲಾತಿ ಪುಸ್ತಕದಲ್ಲಿ 'ಎರಡು ಕನಸು' ಚಲನಚಿತ್ರದ, 'ಪೂಜಿಸಲೆಂದೇ ಹೂಗಳ ತಂದೆ ದರುಶನ ಕೋರಿ ನಾ ನಿಂದೇ ತೆರೆಯೋ ಬಾಗಿಲನು ರಾಮ... ಮೋಡದಮೇಲೆ ಚಿನ್ನದ ನೀರು ಚೆಲ್ಲುತ ಸಾಗಿದೆ ಹೊನ್ನಿನ ತೇರು ಮಾಣಿಕ್ಯದಾರತಿ ಉಷೆತಂದಿಹಳು...ತಾಮಸವೇಕಿನ್ನು ಸ್ವಾಮಿ, ತೆರೆಯೋ ಬಾಗಿಲನು, ರಾಮ...' ಎಂದು ಇಡೀ ಹಾಡನ್ನೇ ಬರೆದಿದ್ದಾರೆ.

ಇನ್ನೊಂದು ಪುಟದಲ್ಲಿ ರೇಣುಕಾ ದೇವ್ಯಶ್ಟೋತ್ತರ ಮತ್ತಿತರ ಭಕ್ತಿಯ ಸ್ತೋತ್ರಗಳನ್ನು ಬರೆದಿರುವ ಬಗ್ಗೆಯೂ ಕಂಡುಬಂದಿದೆ.

ಆಸ್ಪತ್ರೆ ಸಿಬ್ಬಂದಿಯ ಈ ತರಹದ ಬರಹಕ್ಕೆ ಲೋಕಾಯುಕ್ತ ಎಸ್ಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಕ್ಷೇತ್ರದ ಆಸ್ಪತ್ರೆನಾ ಇದು' ಎಂದು ಅಲ್ಲಿನ ಸಿಬ್ಬಂದಿಯವರಿಗೆ ಪ್ರಶ್ನೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News