×
Ad

ಕೋಮು ದ್ವೇಷ ಭಾಷಣ ಮಾಡಿದ ಆರೋಪ; ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್ಐಆರ್ ದಾಖಲು

ʼʼಕಲಬುರಗಿಯನ್ನು ಛೋಟಾ ಪಾಕಿಸ್ತಾನ ಮಾಡಲು ಸರಕಾರ ಮುಂದಾಗಿದೆʼʼ ಎಂದಿದ್ದ ದತ್ತಾತ್ರೇಯ ಪಾಟೀಲ್

Update: 2026-06-03 21:53 IST

ಕಲಬುರಗಿ: “ಕಲಬುರಗಿಯನ್ನು ಪಾಕಿಸ್ತಾನ ರೀತಿಯಲ್ಲಿ ಮಾಡಲು ಇಲ್ಲಿನ ನಾಯಕರು ಹಾಗೂ ಸರ್ಕಾರ ಕೈ ಹಾಕುತ್ತಿದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ದಕ್ಷಿಣ ಮತ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ (ಅಪ್ಪುಗೌಡ) ವಿರುದ್ಧ ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಳಂದ ಗಲಭೆ ಪ್ರಕರಣವನ್ನು ವಾಪಸ್ ಪಡೆದಿರುವುದನ್ನು ಖಂಡಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ವತಿಯಿಂದ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರಿದ್ದ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ದತ್ತಾತ್ರೇಯ ಪಾಟೀಲ್, "ಹಿಂದೆ ಮುಸ್ಲಿಮ್ ಲೀಗ್ ನಿಂದ ಶಾಸಕರಾಗಿ ಜಯಿಸಿದ್ದ ಖಮರುಲ್ ಇಸ್ಲಾಂ 'ಕಲಬುರಗಿಯನ್ನು ಛೋಟಾ ಪಾಕಿಸ್ತಾನ' ಮಾಡ್ತೀನಿ ಎಂದು ಹೇಳುತ್ತಿದ್ದರು. ಆಗ ಇರುವ ನಾಯಕರು ಛೋಟಾ ಪಾಕಿಸ್ತಾನ ನಿರ್ಮಿಸಲು ಆಗಲಿಲ್ಲ, ಇವತ್ತಿನ ನಾಯಕರು ಹಾಗೂ ಸರಕಾರ ಮತ್ತೊಮ್ಮೆ ಕಲಬುರಗಿಯನ್ನು ಪಾಕಿಸ್ತಾನ ರೀತಿಯಲ್ಲಿ ಮಾಡಲು ಕೈ ಹಾಕುತ್ತಿದೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಮಾಜಿ ಶಾಸಕನ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ಅಝ್ಗರ್ ಹುಸೈನ್ ಎಂಬಾತರು ನಗರದ ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದರು. ದೂರಿನ ಮೇರೆಗೆ ಸ್ಟೇಷನ್ ಬಝಾರ್ ಠಾಣೆಯ ಪೊಲೀಸರು ಬುಧವಾರ ಸಂಜೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಠಾಣೆಯಲ್ಲಿ 87/2026 ಕಲಂ 353(1)(ಬಿ) ಹಾಗೂ 196 ಬಿಎನ್ಎಸ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News