×
Ad

ಬಿಇಡಿ ಪದವಿ ಹೊಂದದ ಉಪನ್ಯಾಸಕರಿಗೆ ವೇತನ ಸಹಿತ ಬಿಇಡಿ ವ್ಯಾಸಂಗಕ್ಕೆ ಸರಕಾರ ಅನುಮತಿ: ಶಶೀಲ್ ನಮೋಶಿ ಸಂತಸ

Update: 2025-07-24 21:25 IST

ಶಶೀಲ್ ಜಿ.ನಮೋಶಿ

ಕಲಬುರಗಿ: ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ 04-02-2008ರ ನಂತರ ನೇಮಕಗೊಂಡು ಅನುದಾನಕ್ಕೆ ಒಳಪಟ್ಟ 364 ಬಿಇಡಿ ಪದವಿ ಹೊಂದದ ಉಪನ್ಯಾಸಕರು ವೇತನ ಸಹಿತ ವ್ಯಾಸಂಗ ಕೈಗೊಳ್ಳಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿ ಆದೇಶ ಹೊರಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಒಂದು ಆದೇಶದಿಂದ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಬಿಇಡಿ ರಹಿತವಾಗಿ ಕಾರ್ಯನಿರ್ವಹಿಸುತ್ತಿರುವ 364 ಉಪನ್ಯಾಸಕರು ನಿಟ್ಟುಸಿರು ಬಿಡುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಉಪನ್ಯಾಸಕರಾಗಿ ಸುಮಾರು 15 ವರ್ಷ ಸೇವೆ ಸಲ್ಲಿಸಿ ತದನಂತರ ವೇತನ ರಹಿತವಾಗಿ 2 ವರ್ಷ ಬಿಇಡಿ ಪದವಿ ವ್ಯಾಸಂಗಕ್ಕೆ ಹೋಗುವುದೆಂದರೆ ಅವರ ಇಡೀ ಕುಟುಂಬವನ್ನು ಅರ್ಥಿಕ ದುಸ್ಥಿತಿಗೆ ತಳ್ಳಿದಂತಾಗುತ್ತಿತ್ತು. ಅಲ್ಲದೆ, ಇದು ಅಸಾಧ್ಯದ ಮಾತಾಗಿತ್ತು. ಈ ಎಲ್ಲ ಸಮಸ್ಯೆಗಳನ್ನು ಪದವೀಧರ ಮತಕ್ಷೇತ್ರ ಮತ್ತು ಶಿಕ್ಷಕರ ಮತಕ್ಷೇತ್ರಗಳಿಂದ ಆಯ್ಕೆಯಾದ ಎಲ್ಲಾ ವಿಧಾನ ಪರಿಷತ್ ಸದಸ್ಯರು ಹಾಗೂ ಉಪನ್ಯಾಸಕರ ಸಂಘಟನೆಯವರು ಮುಖ್ಯಮಂತ್ರಿಗಳ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಇಲಾಖೆ ಸಚಿವರ ಗಮನಕ್ಕೆ ತಂದು ಒತ್ತಡ ಹೇರಿದ ಪರಿಣಾಮವಾಗಿ ಸರಕಾರ ಈ ಒಳ್ಳೆಯ ನಿರ್ಣಯ ಕೈಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಹಿಂದೆ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಬಿಇಡಿ. ಪದವಿ ಹೊಂದದೆ ನೇಮಕಗೊಂಡ ಉಪನ್ಯಾಸಕರಿಗೆ 2 ಬ್ಯಾಚುಗಳಲ್ಲಿ ವೇತನ ಸಹಿತ ಬಿಇಡಿ ವ್ಯಾಸಂಗ ಕೈಗೊಳ್ಳಲು ಅನುಮತಿ ನೀಡಿತ್ತು. ಆದಾದ ನಂತರ ಜೆಓಸಿ ಕೋರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಇಡಿ ರಹಿತ ಉಪನ್ಯಾಸಕರಿಗೂ ಕೂಡ ವೇತನ ಸಹಿತ ವ್ಯಾಸಂಗ ಮಾಡಿಕೊಂಡು ಬರಲು ಅನುಮತಿ ನೀಡಿದ ಮಾದರಿಯಲ್ಲಿಯೇ ಈಗ ಸರಕಾರ ಆದೇಶ ಹೊರಡಿಸಿರುವುದು ಉಪನ್ಯಾಸಕರಿಗೆ ಸಂತಸ ತಂದಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News