×
Ad

ಕಲಬುರಗಿಯನ್ನು ಛೋಟಾ ಪಾಕಿಸ್ತಾನ ಮಾಡಲು ಸರಕಾರ ಮುಂದಾಗಿದೆ: ದತ್ತಾತ್ರೇಯ ಪಾಟೀಲ್ ವಿವಾದಾತ್ಮಕ ಹೇಳಿಕೆ

ಕೋಮು ದ್ವೇಷ ಭಾಷಣ ಮಾಡಿರುವ ಬಿಜೆಪಿ ಮಾಜಿ ಶಾಸಕನ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

Update: 2026-06-03 10:42 IST

ಕಲಬುರಗಿ: "ಕಲಬುರಗಿಯನ್ನು ಪಾಕಿಸ್ತಾನ ರೀತಿಯಲ್ಲಿ ಮಾಡಲು ಇಲ್ಲಿನ ನಾಯಕರು ಹಾಗೂ ಸರಕಾರ ಕೈ ಹಾಕುತ್ತಿದೆ" ಎನ್ನುವ ಮೂಲಕ ದಕ್ಷಿಣ ಮತ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ (ಅಪ್ಪುಗೌಡ) ವಿವಾದಾತ್ಮಕ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ದ್ವೇಷ ಭಾಷಣ ಮಾಡಿರುವ ಮಾಜಿ ಶಾಸಕರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆಳಂದ ಗಲಭೆ ಪ್ರಕರಣವನ್ನು ವಾಪಸ್ ಪಡೆದಿರುವುದನ್ನು ಖಂಡಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ವತಿಯಿಂದ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರಿದ್ದ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ದತ್ತಾತ್ರೇಯ ಪಾಟೀಲ್, "ಹಿಂದೆ ಮುಸ್ಲಿಮ್ ಲೀಗ್ ನಿಂದ ಶಾಸಕರಾಗಿ ಜಯಿಸಿದ್ದ ಖಮರುಲ್ ಇಸ್ಲಾಂ 'ಕಲಬುರಗಿಯನ್ನು ಛೋಟಾ ಪಾಕಿಸ್ತಾನ' ಮಾಡ್ತೀನಿ ಎಂದು ಹೇಳುತ್ತಿದ್ದರು. ಆಗ ಇರುವ ನಾಯಕರು ಛೋಟಾ ಪಾಕಿಸ್ತಾನ ನಿರ್ಮಿಸಲು ಆಗಲಿಲ್ಲ, ಇವತ್ತಿನ ನಾಯಕರು ಹಾಗೂ ಸರಕಾರ ಮತ್ತೊಮ್ಮೆ ಕಲಬುರಗಿಯನ್ನು ಪಾಕಿಸ್ತಾನ ರೀತಿಯಲ್ಲಿ ಮಾಡಲಿಕ್ಕೆ ಕೈ ಹಾಕುತ್ತಿದೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾನೂನು ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಕಲಬುರಗಿ ನಗರವನ್ನು 'ಛೋಟಾ ಪಾಕಿಸ್ತಾನ" ಎಂದು ಉಲ್ಲೇಖಿಸುವ ಮೂಲಕ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಕಲಬುರಗಿ ಜನರನ್ನು ಅವಮಾನಿಸಿದ್ದಾರೆ, ಕೋಮು ದ್ವೇಷ ಭಾಷಣ ಮಾಡುವ ಮೂಲಕ ಇಲ್ಲಿನ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡಿದ್ದಾರೆ. ಇಂಥವರ ವಿರುದ್ಧ ಕೂಡಲೇ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಮುದ್ವೇಷ ಹರಡುವ ಹೇಳಿಕೆ ನೀಡಿರುವ ಮಾಜಿ ಶಾಸಕನ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಮುಖಂಡ ಸೈಯದ್ ಅಲೀಮ್ ಇಲಾಹಿ ಸೇರಿದಂತೆ ಹಲವು ಸಾಮಾಜಿಕ ಹೋರಾಟಗಾರರು ಒತ್ತಾಯಿಸಿದ್ದಾರೆ.

ಈ ಹಿಂದೆ ಬಿಜೆಪಿ ನಾಯಕ ಎನ್.ರವಿಕುಮಾರ್ ಅವರು ಕಲಬುರಗಿಗೆ ಬಂದು ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರನ್ನು ಪಾಕಿಸ್ತಾನದಿಂದ ಬಂದಿರುವಂತಹ ಅಧಿಕಾರಿಯಂತೆ ಕಾಣುತ್ತಾರೆ ಎಂಬ ಹೇಳಿಕೆಗೆ ವ್ಯಾಪಕವಾಗಿ ವಿರೋಧ ವ್ಯಕ್ತವಾಗಿದ್ದರಿಂದ ಕಾನೂನು ವಿಚಾರಣೆಗೆ ಒಳಗಾಗಿದ್ದರು.

ಇದೀಗ ಮತ್ತೊಮ್ಮೆ ಆಳಂದ ಪ್ರಕರಣದ ಕ್ರಮವನ್ನು ಬಳಸಿಕೊಂಡು ಕಲಬುರಗಿಯಂತಹ ಬಹುಸಾಂಸ್ಕೃತಿಕ ಮತ್ತು ಸೌಹಾರ್ದದ ನೆಲೆಯಾದ ಜಿಲ್ಲೆಯಲ್ಲಿ ಧರ್ಮಾಧಾರಿತ ಹಾಗೂ ಪ್ರಚೋದನಾತ್ಮಕ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಮಾಡುವ ಯತ್ನವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಮಾಜಿ ಸಂಸದ ಡಾ.ಉಮೇಶ್ ಜಾಧವ್, ಶಾಸಕ ಬಸವರಾಜ್ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಬಿ.ಜಿ.ಪಾಟೀಲ್, ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್, ಅಮರನಾಥ್ ಪಾಟೀಲ್, ಸುಭಾಷ ಗುತ್ತೇದಾರ್, ಹರ್ಷಾನಂದ ಗುತ್ತೇದಾರ್ ಸೇರಿದಂತೆ ಬಿಜೆಪಿ ಮುಖಂಡರು ವೇದಿಕೆಯಲ್ಲಿದ್ದರು.

ಜಿಲ್ಲೆಯ ಶಾಂತಿ ಕದಡಲು ಬಿಜೆಪಿಗೆ ಅವಕಾಶ ನೀಡೆವು: ಫರಾಝ್ ಉಲ್ ಇಸ್ಲಾಂ

ಮಾಜಿ ಸಚಿವ ದಿ.ಖಮರುಲ್ ಇಸ್ಲಾಂ ಪುತ್ರ ಹಾಗೂ ಕಾಂಗ್ರೆಸ್ ಮುಖಂಡ ಫರಾಝ್ ಉಲ್ ಇಸ್ಲಾಂ ಮಾತನಾಡಿ, "ನಮ್ಮ ತಂದೆ ದೀರ್ಘಕಾಲದ ರಾಜಕೀಯದಲ್ಲಿ ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗಿದ್ದಾರೆ. ಮೀಲಾದುನ್ನಬಿ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯದ ಧಾರ್ಮಿಕ ಮುಖಂಡರನ್ನು ಆಹ್ವಾನಿಸಿ ಸೌಹಾರ್ದ ಮೆರೆಯುತ್ತಿದ್ದರು. ಅವರು ಕಲಬುರಗಿಯಲ್ಲಿ ಭಾತೃತ್ವದ ಸಂದೇಶ ಸಾರಿದ್ದಾರೆ. ಆದರೆ ಇಂದು ಬಿಜೆಪಿಯ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ತರಹ ಹೇಳಿಕೆ ನೀಡಿದ್ದಾರೆ. ದ್ವೇಷ ಭಾಷಣ ಮಾಡಿರುವ ಮಾಡಿರುವ ಅವರ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಶಾಂತಿಯ ವಾತಾವರಣವನ್ನು ಕಲುಷಿತಗೊಳಿಸಲು ಬಿಜೆಪಿ ನಾಯಕರು ಷಡ್ಯಂತ್ರ ಮಾಡುತ್ತಿದ್ದಾರೆ". ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News