ಹಲಕರ್ಟಿ | ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ : ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದ ವಾರ್ಡ ನಂ.1ರ ಲಕ್ಷ್ಮೀ ನಗರ, ಮಲ್ಲಯನಗುಡಿ, ಹಾಗೂ ವೀರಭದ್ರೇಶ್ವರ ಗುಡಿಯ ಹತ್ತಿರದ ಬಡಾವಣೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ, ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಎಸ್.ಯು.ಸಿ.ಐ ಕಮ್ಯೂನಿಷ್ಟ್ ಪಕ್ಷದ ಮುಖಂಡರ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಕಳೆದ ಎರಡು ತಿಂಗಳಿಂದ ಗ್ರಾಮದ ಹಲವಾರು ಬಡಾವಣೆಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಇದರ ಬಗ್ಗೆ ಗ್ರಾಮ ಪಂಚಾಯತ್ ಇಲ್ಲಿಯವರೆಗೂ ಗಮನ ಹರಿಸದೆ ಇರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಪ್ರತಿದಿನವೂ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ. ಪಂಚಾಯತ್ ಗೆ ಹಲವು ಬಾರಿ ಪ್ರತಿಭಟನೆಗಳ ಮೂಲಕ ಗಮನಕ್ಕೆ ತಂದರೂ, ಸಮಸ್ಯೆ ಬಗೆಹರಿಯದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ SUCI ಕಮ್ಯುನಿಸ್ಟ್ ಪಕ್ಷದ ಸ್ಥಳೀಯ ಸಮಿತಿಯ ಕಾರ್ಯದರ್ಶಿಗಳಾದ ಶರಣು ಹೇರೂರ ಸದಸ್ಯರಾದ ಗೌತಮ ಪರತೂರಕರ್, ಶಿವುಕುಮಾರ ಆಂದೊಲಾ, ಚೌಡಪ್ಪ ಗಂಜಿ, ಭೀಮಪ್ಪ ಮಾಟ್ನಳ್ಳಿ, ಸಾಬಣ್ಣ ಸುಣಗಾರ, ವೀರೇಶ ನಾಲವಾರ, ನಾನಾಸಾಹೇಬ್ ಕೊಲಕುಂದಿ, ಶಿವಯೊಗಿ ಬಳ್ಳಾ, ಹಾಗೂ ಹಲಕಟ್ಟಾ ಗ್ರಾಮದ ಮಹಿಳೆಯರು, ಇನ್ನಿತರರು ಇದ್ದರು.