×
Ad

ಕಲಬುರಗಿ| ಹಾಸ್ಟೆಲ್ ವಾರ್ಡನ್ ನಿಂದ ವಿದ್ಯಾರ್ಥಿನಿ ಮೇಲೆ ಹಲ್ಲೆ ಆರೋಪ: ವಾರ್ಡನ್ ಎತ್ತಂಗಡಿ

Update: 2025-08-02 20:09 IST

ಕಲಬುರಗಿ: ಹಾಸ್ಟೆಲ್ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ವೊಬ್ಬರು ಹಲ್ಲೆ ನಡೆಸಿರುವ ಘಟನೆ ನಡೆದಿರುವ ಬೆನ್ನಲ್ಲೇ ಇದೀಗ ಹಲ್ಲೆ ಮಾಡಿರುವ ಆರೋಪ ಹೊತ್ತಿರುವ ನಿಲಯ ಪಾಲಕಿಯನ್ನು ಎತ್ತಂಗಡಿ ಮಾಡಿ ಆದೇಶಿಸಲಾಗಿದೆ.

ನಗರದ ಹೈಕೋರ್ಟ್ ರಿಂಗ್ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶ್ರೀಮತಿ ಇಂದಿರಾಗಾಂಧಿ ಮಹಿಳಾ ನರ್ಸಿಂಗ್ ವಸತಿ ನಿಲಯದ ವಿದ್ಯಾರ್ಥಿನಿಗೆ ಹಾಸ್ಟೆಲ್ ವಾರ್ಡನ್ ಅರ್ಚನಾ ಎಂಬವರು ಹಲ್ಲೆ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದರು. ಹಲ್ಲೆ ನಡೆಸಿರುವುದನ್ನು ಖಂಡಿಸಿ ಹಾಗೂ ಮೂಲಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ, ಗುರುವಾರ ರಾತ್ರಿ ಊಟ ಮಾಡದೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಈ ಕುರಿತು ವಾರ್ತಾ ಭಾರತಿ ಕೂಡಲೇ ವರದಿ ಪ್ರಕಟಿಸಿತ್ತು.

ವರದಿ ಮಾಡಿದ ಬೆನ್ನಲ್ಲೇ ಹಿಂದುಳಿದ ವರ್ಗಗಳ ಇಲಾಖೆಯ ಉಪನಿರ್ದೇಶಕರು ಹಾಸ್ಟೆಲ್ ಗೆ ಭೇಟಿ ನೀಡಿ, ವಿಚಾರಣೆ ನಡೆಸಿದ್ದರು. ಸಮಸ್ಯೆಗಳನ್ನು ಆಲಿಸಿದ ಬಳಿಕ ಉಪನಿರ್ದೇಶಕರು, ಅಲ್ಲಿನ ವಾರ್ಡನ್ ಅರ್ಚನಾ ಅವರನ್ನು ʼರಿಲೀವ್ʼ ಮಾಡಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಅರ್ಚನಾ ಅವರ ಜಾಗಕ್ಕೆ ಮಂದಾಕಿನಿ ಅವರನ್ನು ವಸತಿ ನಿಲಯದ ಪಾಲಕಿಯಾಗಿ (ಪ್ರಭಾರ) ನೇಮಿಸಲಾಗಿದೆ ಎಂದು ಉಪನಿರ್ದೇಶಕ ಸೋಮಶೇಖರ್ ಅವರು ತಿಳಿಸಿದ್ದಾರೆ.

 

ʼವಾರ್ತಾಭಾರತಿʼ ವರದಿಯ ಮರುದಿನ ಶುಕ್ರವಾರ ಪ್ರಜ್ಞಾ ಕಾನೂನು ಸಲಹಾ ಸಮಿತಿ ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನಿಯೋಗವು ಭೇಟಿ ನೀಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿವೆ.

ಈ ಕುರಿತು ನಿಲಯದ ವಿದ್ಯಾರ್ಥಿನಿಯರನ್ನು ಸಂಪರ್ಕಿಸಿದಾಗ, ಸದ್ಯ ಯಾವುದೇ ಸಮಸ್ಯೆ ಇಲ್ಲ, ಆಹಾರ ಸರಿಯಾಗಿ ನೀಡುತ್ತಿದ್ದಾರೆ. ಸರ್ಕಾರ ನೀಡಿರುವ ಸೌಲಭ್ಯಗಳನ್ನು ನಮಗೆ ದೊರಕಿಸುವಲ್ಲಿ ನಿರಾಕರಣೆ ಮಾಡಿದರೆ ಮತ್ತೆ ಮೇಲಧಿಕಾರಿಗಳತ್ತ ಮೋರೆ ಹೋಗುವುದಾಗಿ ತಿಳಿಸಿದ್ದಾರೆ.

ವಸತಿ ನಿಲಯದಲ್ಲಿ ವಾರ್ಡನ್ ಹಾಗೂ ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ಹೊಂದಾಣಿಕೆಯ ಕೊರತೆ ಕಾಣಿಸಿದೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ವಾರ್ಡನ್ ಸ್ಪಂದಿಸಬೇಕಿತ್ತು. ಇದರಲ್ಲಿ ಅವರು ವಿಫಲರಾಗಿದ್ದಾರೆ. ಹಾಗಾಗಿ ಅವರ ಸೇವೆಯನ್ನು ಜಿಲ್ಲೆಯಿಂದ ಬಿಡುಗಡೆ (ರಿಲೀವ್) ಮಾಡಲಾಗಿದೆ. ನಿಲಯದ ಹಳೆಯ ಸಮಸ್ಯೆಗಳನ್ನು ಈಗಾಗಲೇ ಬಗೆಹರಿಸಲಾಗಿದೆ.

ಸೋಮಶೇಖರ್ (ಉಪನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News