×
Ad

ಕನ್ನಡ ಅಧ್ಯಯನ ಸಂಸ್ಥೆಯು ಅನ್ನ, ಅರಿವು, ಆಶ್ರಯ ಕೊಟ್ಟಿದೆ: ವಿಕ್ರಮ ವಿಸಾಜಿ

Update: 2025-09-28 23:08 IST

ಕಲಬುರಗಿ: ಗುಲಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯು ಅನ್ನ, ಅರಿವು, ಆಶ್ರಯ ಕೊಟ್ಟಿದೆ, ಈ ಸಂಸ್ಥೆಯಲ್ಲಿ ಕಲಿತವರು ಸಾವಿರಾರು ಜನರು ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ಖ್ಯಾತ ವಿಮರ್ಶಕರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ವಿಕ್ರಮ ವಿಸಾಜಿ ಯವರು ಅಭಿಪ್ರಾಯಪಟ್ಟರು.

ಸಿಂದಗಿ ನೆಲೆ ಪ್ರಕಾಶನದ ಎಂ.ಎಂ. ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನವು ಜಾನಪದ ವಿದ್ವಾಂಸರಿಗೆ ನೀಡುವ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿರುವ ಹಿನ್ನೆಲೆಯಲ್ಲಿ, ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಎಚ್.ಟಿ.ಪೋತೆ ಹಾಗೂ ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಡಾ.ಸುಜಾತಾ ಚಲವಾದಿ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ ಮತ್ತು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಗೌರವ ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಹಿಂದೆ ಅಧ್ಯಯನ ಸಂಸ್ಥೆಯಲ್ಲಿ ಹಲವು ಅಧ್ಯಾಪಕರಿದ್ದರು. ಆದರೆ ಇಂದು ಎಚ್. ಟಿ. ಪೋತೆ ಅವರು ಒಬ್ಬರೇ ಇದ್ದರೂ ಸಂಸ್ಥೆಯನ್ನು ಚೆನ್ನಾಗಿ ಕಟ್ಟಿಬೆಳೆಸಿದ್ದಾರೆ. ಯಾವುದೇ ಕುಂದು ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಅತ್ಯಂತ ಕ್ರಿಯಾಶೀಲತೆಯಿಂದ ಅಚ್ಚುಕಟ್ಟಾಗಿ ಬೆಳೆಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪ್ರಾರಂಭದಲ್ಲಿ ಕೇವಲ ಜಾನಪದಕ್ಕೆ ಸೀಮಿತವಾಗಿದ್ದ ಪೋತೆಯವರು ಇಂದು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಗಂಭೀರವಾಗಿ ಕೃಷಿಮಾಡಿ ಸೈಯನಿಸಿಕೊಂಡಿದ್ದಾರೆ. ಪೋತೆಯವರು ರಚಿಸಿದ 'ಮಹಾಯಾನ' ಕಾದಂಬರಿಯು ಬಾಬಾ ಸಾಹೇಬರನ್ನು ಕುರಿತು ರಚಿಸತವಾದ ಮೊಟ್ಟಮೊದಲ ಕಾದಂಬರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೋತೆಯವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಕನ್ನಡ ಅಧ್ಯಯನ ಸಂಸ್ಥೆ ಕಲ್ಯಾಣ ಕರ್ನಾಟಕಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಕನ್ನಡ ಅಧ್ಯಾಪಕರಿಗೆ ಒಂದು ವಿಶಿಷ್ಟ ಸ್ಥಾನವಿದೆ. ಹೋರಾಟದ ಮನೋಭಾವ ಕಡಿಮೆಯಾಗಿದೆ. ಸುಜಾತ ಚಲವಾದಿಯವರು ಬದ್ಧತೆಯಿಂದ ಬರೆಯುತ್ತಿದ್ದಾರೆ. ಈ ಸನ್ಮಾನ ಪರಸ್ಪರ ಗೌರವ ಹೆಚ್ಚಿಸುತ್ತಿದೆ ಎಂದು ಹೇಳಿದರು.

ಬಳಿಕ ಮಾತನಾಡಿದ ಲೇಖಕಿ ಡಾ.ಸುಜಾತಾ ಚಲುವಾದಿ, ಸನ್ಮಾನ ಖುಷಿ ನೀಡಿದೆ. ಜವಾಬ್ದಾರಿ ಹೆಚ್ಚಿಸಿದೆ. ಎಚ್ ಟಿ ಪೋತೆಯವರ ಮಾರ್ಗದರ್ಶನ ತಮ್ಮ ಈ ಸಾಧನೆಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಖಾಜಾವಲಿ ಈಚನಾಳ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಸಾಹಿತಿಗಳಾದ ಡಾ.ಶ್ರೀಶೈಲ ನಾಗರಾಳ, ಡಾ.ಸೂರ್ಯಕಾಂತ ಸುಜಾತ, ಡಾ.ಅಮೃತ ಕಟಕೆ, ಡಾ.ಶರಣಪ್ಪ ಮಾಳ್ಗೆ, ಗಜಲ್ಕಾರ ಡಾ.ದಸ್ತಗೀರಸಾಬ ದಿನ್ನಿ, ಡಾ. ಸೂರ್ಯಕಾಂತ ಆತನೂರು, ವಿಠ್ಠಲ ಮುಕುರಂಭ, ಮರೆಪ್ಪ ಮೇತ್ರೆ, ಜಗಪ್ಪ ತಳವಾರ್, ಮಲ್ಲಪ್ಪ ಮಾನೆಗಾರ, ಭೀಮಣ್ಣ, ಸುವರ್ಣ ವಜ್ಜೆ, ಡಾ.ರುಕ್ಮಿಣಿ, ಡಾ.ವೀಣಾ ಇನ್ನಿತರರು ಉಪಸ್ಥಿತರಿದ್ದರು‌. ಕನ್ನಡ ಅಧ್ಯಾಪಕರ ಸಂಘದ ಉಪಾಧ್ಯಕ್ಷ ಡಾ. ಪಂಡಿತ್ ಬಿ.ಕೆ ಸ್ವಾಗತಿಸಿ ನಿರೂಪಿಸಿದರು. ಡಾ. ಶಿವಶರಣಪ್ಪ ಮೋತಕಪಲ್ಲಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News