×
Ad

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಜಾಥಾ ; ಕಲಬುರಗಿಯಲ್ಲಿ ಪ್ರತಿಭಟನೆ : ತಾಹೀರ್‌ ಹುಸೇನ್

Update: 2025-10-10 21:12 IST

ರಾಯಚೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅಭಿವೃದ್ದಿ ನಿಧಿಗಳು ಬಿಡುಗಡೆ ಆಗುತ್ತಿದ್ದರೂ ಬದಲಾವಣೆ ಕಾಣಿಸದಿರುವ ಹಿನ್ನೆಲೆಯಲ್ಲಿ, ನ್ಯಾಯಬದ್ದ ಅಭಿವೃದ್ಧಿಗೆ ಆಗ್ರಹಿಸಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಅಕ್ಟೋಬರ್ 6ರಿಂದ 13ರ ತನಕ ನಿಷ್ಠೆ ಜಾಥಾ ಪ್ರಾರಂಭಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ತಾಹೀರ್‌ ಹುಸೇನ್ ತಿಳಿಸಿದ್ದಾರೆ.

ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಾದೇಶಿಕ ಅಸಮಾನತೆಯನ್ನು ಕಡಿಮೆ ಮಾಡಲು ಸರ್ಕಾರಗಳು ಜವಾಬ್ದಾರಿಯಾಗಿರಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳು ಹೇಳುತ್ತಲೇ ಬಂದಿವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸಾವಿರಾರು ಕೋಟಿ ರೂ. ಅನುದಾನ ಘೋಷಿಸಲಾಗುತ್ತಿದೆ, ಆದರೆ, ಪರಿಸ್ಥಿತಿ ಬದಲಾವಣೆ ಕಾಣುತ್ತಿಲ್ಲ. ಬಾಣಂತಿಯರ ಸಾವು, ಅಪೌಷ್ಟಿಕತೆ, ಮಕ್ಕಳ ಮಾರಾಟ, ಬಾಲ್ಯ ವಿವಾಹ ಮತ್ತು ನಿರುದ್ಯೋಗ ಮುಂತಾದ ಸಮಸ್ಯೆಗಳು ಪರಿಹಾರ ಕಂಡಿಲ್ಲ ಎಂದರು.

371(ಜೆ) ಕಾಯ್ದೆ ಅನುಷ್ಠಾನಗೊಳ್ಳುವುದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ನಿಗದಿಪಡಿಸಲಾಗಿದೆ. ಆದರೂ ನೇಮಕಾತಿಗಳು ನಡೆಯುತ್ತಿಲ್ಲ. ಪ್ರತಿವರ್ಷ ಸುಮಾರು 10,000 ಇಂಜಿನಿಯರ್ ವಿದ್ಯಾರ್ಥಿಗಳು ಶಿಕ್ಷಣ ಮುಗಿಸುತ್ತಿದ್ದಾರೆ, ಆದರೆ ಉದ್ಯೋಗಕ್ಕೆ ಬೇರೆಡೆ ವಲಸೆ ಹೋಗುತ್ತಿದ್ದಾರೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯದೇ, ಈ ಕ್ಷೇತ್ರಗಳಲ್ಲಿ ಪರಿಣಿತರ ಕೊರತೆ ಎದುರಾಗುತ್ತಿದೆ. 22,000 ಶಿಕ್ಷಕ ಹುದ್ದೆಗಳು ಖಾಲಿಯಾಗಿವೆ; 80,000 ಸರ್ಕಾರಿ ಹುದ್ದೆಗಳೂ ಖಾಲಿ ಇರುವ ಸ್ಥಿತಿಯಿದೆ. ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಜನಸಂಖ್ಯೆಗೆ ಅನುಗುಣವಾಗಿ ಸ್ಥಾಪನೆಯಾಗಿಲ್ಲ ಎಂದರು.

ಜಾಥಾ ಬೀದರ್‌ನಿಂದ ಪ್ರಾರಂಭವಾಗಿದ್ದು, 11 ಪ್ರಮುಖ ಬೇಡಿಕೆಗಳನ್ನು ಉಲ್ಲೇಖಿಸಿದೆ. ಜಾಥಾ ಸಮಾರೋಪದ ನಂತರ ಈ ಬೇಡಿಕೆಗಳ ಪಟ್ಟಿ ಸರಕಾರಕ್ಕೆ ಸಲ್ಲಿಸಲಾಗುವುದು. ಈ ಭಾಗದ ಶಾಸಕರು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸರ್ಕಾರ ಬದ್ದತೆಯನ್ನು ತೋರಬೇಕು ಎಂದು ಪಕ್ಷ ಅಭಿಪ್ರಾಯಪಟ್ಟಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಮತ್ತು ಎಲ್ಲಾ ರಾಜಕೀಯ ಪಕ್ಷಗಳು, ಸಂಘಟನೆಗಳಿಂದ ಸಹಕಾರ ನಿರೀಕ್ಷಿಸಲಾಗಿದೆ.

ಕಲಬುರಗಿಯಲ್ಲಿ ಜಾಥಾ ತಲುಪಿದಾಗ, ಕೆಕೆಆರ್ ಡಿಬಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಒತ್ತಡ ಹೇರಲಾಗುವುದು ಎಂದು ತಾಹೀರ ಹುಸೇನ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ ಸಾಲಿಯಾನ್, ಜಿಲ್ಲಾಧ್ಯಕ್ಷ ಶೇಖ್ ಫರೀದ್ ಉಮರಿ, ಅಬ್ದುಲ್ ಸಲಾಂ, ಇರ್ಫಾನ್ ಮತ್ತು ಅಬ್ದುಲ್ ಗನಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News